ಬೆಂಗಳೂರು: 2026–27ನೇ ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿಗೆ ಪ್ರವೇಶ ಪಡೆಯಲು ವಯೋಮಿತಿಯಲ್ಲಿ 90 ದಿನಗಳ ಸಡಿಲಿಕೆ ನೀಡುವಂತೆ ಕೋರಿ ಪ್ರಸ್ತುತ ಯುಕೆಜಿಯಲ್ಲಿರುವ ಮಕ್ಕಳ ಪೋಷಕರ ಗುಂಪೊಂದು ಸಾರ್ವಜನಿಕ ಶಿಕ್ಷಣ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ರಾಜ್ಯ ಸರ್ಕಾರದ ಪ್ರಕಾರ ಪ್ರಸ್ತುತ, ಒಂದನೇ ತರಗತಿಗೆ ಪ್ರವೇಶ ಪಡೆಯಲು ಜೂನ್ 1 ರೊಳಗೆ ಆರು ವರ್ಷಗಳನ್ನು ಪೂರ್ಣಗೊಳಿಸಿರಬೇಕು. ಆದಾಗ್ಯೂ, ಜೂನ್ 2 ಮತ್ತು ಆಗಸ್ಟ್ 31 ರ ನಡುವೆ ಜನಿಸಿದ ಅನೇಕ ಮಕ್ಕಳು ಯುಕೆಜಿಯನ್ನು ಪೂರ್ಣಗೊಳಿಸಿದರೂ ಒಂದನೇ ತರಗತಿಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ ಈ ಮಕ್ಕಳು ಹುಟ್ಟಿದ ದಿನಾಂಕದ ಕಾರಣದಿಂದ ಮತ್ತೆ ಯುಕೆಜಿಯಲ್ಲಿ ವ್ಯಾಸಂಗ ಮಾಡುವುದನ್ನು ತಪ್ಪಿಸಲು ಆಗಸ್ಟ್ 31 ರವರೆಗೆ ವಯೋಮಿತಿಯನ್ನು ವಿಸ್ತರಿಸಬೇಕೆಂದು ಪೋಷಕರು ಮನವಿ ಮಾಡಿದ್ದಾರೆ.
2025–26ರ ಶೈಕ್ಷಣಿಕ ವರ್ಷದಲ್ಲಿ ಜೂನ್ 1 ರೊಳಗೆ 5 ವರ್ಷ 5 ತಿಂಗಳು ಪೂರೈಸಿ ಯುಕೆಜಿ ಮುಗಿಸಿದ ಮಕ್ಕಳನ್ನು 1ನೇ ತರಗತಿಗೆ ಸೇರಿಸಲು ಇದೇ ರೀತಿಯ ವಿನಾಯಿತಿಯನ್ನು ರಾಜ್ಯ ಶಿಕ್ಷಣ ಇಲಾಖೆಯು ಅವಕಾಶ ನೀಡಿತ್ತು ಎಂದು ಪೋಷಕರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ವರ್ಷ ಅದೇ ರೀತಿಯ ವಿನಾಯಿತಿ ಇಲ್ಲದೆ ಮುಂದಿನ ಬ್ಯಾಚ್‌ನ ಮಕ್ಕಳು ಒಂದೇ ಕಲಿಕೆಯ ಹಂತದಲ್ಲಿದ್ದರೂ ಅಸಮಾನತೆ ಎದುರಿಸಬೇಕಾಗುತ್ತದೆ. 2026–27ನೇ ಸಾಲಿನಲ್ಲಿ 1ನೇ ತರಗತಿ ಪ್ರವೇಶಕ್ಕೆ 90 ದಿನಗಳ ವಯೋಮಿತಿ ಸಡಿಲಿಕೆ ನೀಡಿ ಶಾಲೆಗಳಿಗೆ ಸುತ್ತೋಲೆ ಹೊರಡಿಸುವ ಮೂಲಕ ನ್ಯಾಯಸಮ್ಮತತೆಯನ್ನು ಕಾಪಾಡುವಂತೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.