ಬೆಂಗಳೂರು: ಬೆಂಗಳೂರಿನಿಂದ ಕೋಲ್ಕತ್ತಾಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ನಂತರ ವಿಮಾನ ಮಧ್ಯದಲ್ಲಿಯೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಿದೆ ಎಂದು ವಿಮಾನಯಾನ ಸಂಸ್ಥೆ ಸೋಮವಾರ ತಿಳಿಸಿದೆ.
ಭಾನುವಾರ ರಾತ್ರಿ ಕೋಲ್ಕತ್ತಾಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ IX2718, ತಾಂತ್ರಿಕ ದೋಷದಿಂದಾಗಿ ಮರಳಿ ಬೆಂಗಳೂರಿಗೆ ಆಗಮಿಸಿ, ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವಕ್ತಾರರು ತಿಳಿಸಿದ್ದಾರೆ.
ಏರ್ ಇಂಡಿಯಾ ವಿಮಾನ ನಿನ್ನೆ ರಾತ್ರಿ 7:05ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಡಬೇಕಿತ್ತು. ಆದರೆ 11 ನಿಮಿಷಗಳ ವಿಳಂಬದೊಂದಿಗೆ 7:16ಕ್ಕೆ ಟೇಕ್-ಆಫ್ ಆಗಿತ್ತು. ಟೇಕ್-ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನದಲ್ಲಿ ಹೈಡ್ರಾಲಿಕ್ ಸಮಸ್ಯೆಯ ತಾಂತ್ರಿಕ ದೋಷ ಕಂಡುಬಂದಿತು. ಈ ಕಾರಣದಿಂದಾಗಿ ಪೈಲಟ್‌ಗಳು ತಕ್ಷಣವೇ ವಿಮಾನವನ್ನು ಮರಳಿ ಬೆಂಗಳೂರಿಗೆ ತರಲು ನಿರ್ಧರಿಸಿದರು.
"ನಮ್ಮ ವಿಮಾನವೊಂದು ತಾಂತ್ರಿಕ ಸಮಸ್ಯೆಯ ನಂತರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮರಳಿತು. ಮುನ್ನೆಚ್ಚರಿಕೆಯಾಗಿ ಇಳಿಯುವ ಮೊದಲು ಇಂಧನ ಮತ್ತು ತೂಕವನ್ನು ಕಡಿಮೆ ಮಾಡಲು ವಿಮಾನ ಆಕಾಶದಲ್ಲಿ ಸುತ್ತುತ್ತದೆ. ನಂತರ ರಾತ್ರಿ 9:19ಕ್ಕೆ ಸುರಕ್ಷಿತವಾಗಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ" ಎಂದು ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೊಂದರೆಗೊಳಗಾದ ಪ್ರಯಾಣಿಕರ ಮುಂದಿನ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಪರ್ಯಾಯ ವಿಮಾನವನ್ನು ನಿಯೋಜಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.