ಬೆಂಗಳೂರು: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಅವರ ನಿಧನದ ಹಿನ್ನೆಲೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಗಸ್ಟ್ 5 ರಂದು ನಡೆಯಬೇಕಿದ್ದ ಪ್ರತಿಭಟನೆಯನ್ನು ಆಗಸ್ಟ್ 8ಕ್ಕೆ ಮುಂದೂಡಿರುವುದಾಗಿ ರಾಜ್ಯ ಕಾಂಗ್ರೆಸ್ ಉಶ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೋಮವಾರ ಘೋಷಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಮಂಗಳವಾರ ಸೋರೆನ್ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
'ಪ್ರತಿಭಟನೆ ನಡೆಸಲಾಗುತ್ತದೆ. ಆದರೆ, ಆಗಸ್ಟ್ 8ಕ್ಕೆ ಮುಂದೂಡಲಾಗಿದೆ' ಎಂದು ಸುರ್ಜೇವಾಲ ಹೇಳಿದರು. ಈ ವೇಳೆ ಉಪ ಮುಖ್ಯಮಂತ್ರಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಇದ್ದರು.
ವಿಧಾನಸಭೆ ಮತ್ತು ಲೋಕಸಭೆಯಲ್ಲಿ ನಡೆದಿದೆ ಎನ್ನಲಾದ 'ಮತಗಳ್ಳತನ'ದ ವಿರುದ್ಧ ಆಗಸ್ಟ್ 5ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಲಾಗಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮಹದೇವಪುರ ಮತ್ತು ರಾಜಾಜಿನಗರದಲ್ಲಿ ಮತಗಳ್ಳತನ ಆಗಿರುವ ಬಗ್ಗೆ ಕಾಂಗ್ರೆಸ್ ಆರೋಪಿಸಿದೆ.