ಮಂಗಳೂರು: ರೈತರೇ ತಮ್ಮ ಭೂಮಿಯಲ್ಲಿ ವಿದ್ಯುತ್ ಉತ್ಪಾದಿಸಿ ಬಳಸಲು ಮತ್ತು ಹೆಚ್ಚುವರಿ ವಿದ್ಯುತ್ ಅನ್ನು ವಿತರಣಾ ಕಂಪನಿಗಳಿಗೆ ಮಾರಾಟ ಮಾಡಲು ಅನುವು ಮಾಡಿಕೊಡುವ ಪಿಎಂ ಕುಸುಮ್-ಎ(ಪ್ರಧಾನ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಏವಮ್ ಉತ್ಥಾನ ಮಹಾಭಿಯಾನ್) ಬಗ್ಗೆ ಕನ್ನಡಿಗರು ತೀವ್ರ ನಿರಾಸಕ್ತಿ ತೋರಿಸಿದ್ದು, ಕಳೆದ ಆರು ವರ್ಷಗಳಲ್ಲಿ ಈ ಯೋಜನೆಗೆ ಒಂದೇ ಒಂದು ಅರ್ಜಿ ಸಲ್ಲಿಕೆಯಾಗಿಲ್ಲ.
ಸ್ಥಿರ ಆದಾಯ ಪಡೆಯುವ ಮತ್ತು ಶುದ್ಧ ಶಕ್ತಿಯನ್ನು ಉತ್ತೇಜಿಸುವ ಸಾಮರ್ಥ್ಯದ ಹೊರತಾಗಿಯೂ, ಈ ಯೋಜನೆ ಪ್ರಾರಂಭವಾಗಿ ಆರು ವರ್ಷ ಕಳೆದರೂ ಇದಕ್ಕೆ ರಾಜ್ಯದಲ್ಲಿ ಯಾವುದೇ ಬೇಡಿಕೆ ಇಲ್ಲ.
2019ರಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಏವಮ್ ಉತ್ಥಾನ್ ಮಹಾಭಿಯಾನ(PM-KUSUM) ಡೀಸೆಲ್ ಮೇಲಿನ ಕೃಷಿಯ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ನೀರಾವರಿಗಾಗಿ ವಿಶ್ವಾಸಾರ್ಹ ಸೌರಶಕ್ತಿಯನ್ನು ಖಚಿತಪಡಿಸುವುದು ಹಾಗೂ ರೈತರ ಆದಾಯ ಹೆಚ್ಚಿಸುವ ಗುರಿ ಹೊಂದಿದೆ.
ಈ ಯೋಜನೆಯು ಮೂರು ಭಾಗಗಳನ್ನು ಒಳಗೊಂಡಿದೆ: ವಿಕೇಂದ್ರೀಕೃತ ಸೌರ ಸ್ಥಾವರಗಳಿಗೆ ಕಾಂಪೊನೆಂಟ್ A, ಕುಸುಮ್- B(ರೈತರಿಗೆ ಸೋಲಾರ್ ಕೃಷಿ ಪಂಪ್ ಸೆಟ್) ಮತ್ತು ಕುಸುಮ್-C (ಕೃಷಿ ಫೀಡರ್ ಗಳ ಸೌರೀಕರಣ) ಯೋಜನೆ.
ಕುಸುಮ್- B ಮತ್ತು C ಯೋಜನೆ ಅನುಷ್ಠಾನದಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡುಬಂದಿದ್ದರೂ, ಮಂಜೂರಾದ ಗುರಿಗಳಿಗಿಂತ ತೀರಾ ಕಡಿಮೆಯಿದೆ ಎಂದು ಹೊಸ ಮತ್ತು ನವೀಕರಿಸಬಹುದಾದ ಇಂಧನ, ವಿದ್ಯುತ್ ಖಾತೆ ರಾಜ್ಯ ಸಚಿವ ಶ್ರೀಪಾದ ಯೆಸ್ಸೊ ನಾಯಕ್ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಜುಲೈ 2025 ರ ಹೊತ್ತಿಗೆ, ಕರ್ನಾಟಕಕ್ಕೆ ಕಾಂಪೊನೆಂಟ್ ಬಿ ಅಡಿಯಲ್ಲಿ 41,365 ಸೌರ ಪಂಪ್‌ಗಳನ್ನು ಮಂಜೂರು ಮಾಡಲಾಗಿತ್ತು. ಆದರೆ ಕೇವಲ 2,388 ಪಂಪ್‌ಗಳನ್ನು ಮಾತ್ರ ಅಳವಡಿಸಲಾಗಿದೆ. ಕಾಂಪೊನೆಂಟ್ ಸಿ(ಫೀಡರ್ ಲೆವೆಲ್ ಸೋಲಾರೈಸೇಶನ್) ಅಡಿಯಲ್ಲಿ 6.28 ಲಕ್ಷ ಪಂಪ್‌ಗಳನ್ನು ಅನುಮೋದಿಸಲಾಗಿದೆ. ಆದರೆ ಕೇವಲ 23,133 ಪಂಪ್‌ಗಳನ್ನು ಮಾತ್ರ ಸೌರೀಕರಣಗೊಳಿಸಲಾಗಿದೆ. ಇದಲ್ಲದೆ, ಕಾಂಪೊನೆಂಟ್ ಸಿ ಅಡಿಯಲ್ಲಿ ವೈಯಕ್ತಿಕ ಪಂಪ್ ಸೋಲಾರೈಸೇಶನ್‌ಗೆ ಯಾವುದೇ ಬೇಡಿಕೆ ಇಲ್ಲ ಎಂದು ತಿಳಿಸಿದ್ದಾರೆ.
ಕುಸುಮ್- ಎ ಯೋಜನೆಯಡಿ ರೈತರು, ರೈತರ ಗುಂಪುಗಳು, ಸಹಕಾರಿ ಸಂಸ್ಥೆಗಳು, ಪಂಚಾಯತ್‌ಗಳು, ರೈತ ಉತ್ಪಾದಕರ ಸಂಸ್ಥೆಗಳು, ನೀರು ಬಳಕೆದಾರರ ಸಂಘಗಳು ವಿದ್ಯುತ್ ಉಪ ಕೇಂದ್ರಗಳಿಂದ 5 ಕಿ.ಮೀ. ಒಳಗೆ 500 ಕಿಲೋ ವ್ಯಾಟ್ ನಿಂದ ಗರಿಷ್ಠ 2 ಮೆಗಾ ವ್ಯಾಟ್ ವರೆಗೆ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಬಹುದು. ಅಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ಅವರೇ ಬಳಸಿಕೊಳ್ಳಬಹುದು. ಹೆಚ್ಚುವರಿ ವಿದ್ಯುತ್ತನ್ನು ಸರ್ಕಾರ ಖರೀದಿಸುತ್ತದೆ. ಇದರಿಂದ ವಿದ್ಯುತ್ ಸಮಸ್ಯೆಗೆ ಪರಿಹಾರ ಸಿಗುತ್ತದೆ. ರೈತರಿಗೂ ಆದಾಯ ಬರುತ್ತದೆ.