ರಾಜ್ಯಾದ್ಯಂತ ಸರ್ಕಾರಿ ಸಾರಿಗೆ ನಿಗಮಗಳ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತಡೆಯಾಜ್ಞೆ ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿರುವ ಕರ್ನಾಟಕ ಹೈಕೋರ್ಟ್, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮುಷ್ಕರ ಮುಂದುವರಿಸಿದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಮಂಗಳವಾರ ಎಚ್ಚರಿಸಿದೆ. ಒಂದು ದಿನ ಮುಷ್ಕರ ಮುಂದೂಡುವಂತೆ ಹೈಕೋರ್ಟ್ ಸೂಚನೆ ನೀಡಿದ ನಂತರವೂ ಸಾರಿಗೆ ನೌಕರರು ಇಂದು ಮುಷ್ಕರ ನಡೆಸಿದ್ದರು. ಇದರಿಂದ ಗರಂ ಆದ ಹೈಕೋರ್ಟ್ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿತು. ಎಸ್ಮಾ ಕಾಯ್ದೆಯಡಿ ಸರ್ಕಾರ ಸಂಘಟನೆಯ ಪದಾಧಿಕಾರಿಗಳನ್ನು ಬಂಧಿಸಬಹುದು ಎಂದು ಖಡಕ್ ಎಚ್ಚರಿಕೆ ನೀಡಿತು. ನಾಳೆ ಮುಷ್ಕರ ನಿಂತಿರುವ ಬಗ್ಗೆ ಮಾಹಿತಿ ನೀಡಬೇಕೆಂದು ಹೈಕೋರ್ಟ್ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಪರ ವಕೀಲರಿಗೆ ಸೂಚಿಸಿ, ಮುಂದಿನ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿದೆ. ಇನ್ನು ಹೈಕೋರ್ಟ್ ಎಚ್ಚರಿಕೆ ಬೆನ್ನಲ್ಲೇ ಸಾರಿಗೆ ನೌಕರರು ಮುಷ್ಕರವನ್ನು ಮುಂದೂಡಿದ್ದಾರೆ. ಈ ಬಗ್ಗೆ ಮಾತನಾಡಿದ, ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಸಾರಿಗೆ ನೌಕರರ ಮುಷ್ಕರವನ್ನು ಮುಂದೂಡಿರುವುದಾಗಿ ಘೋಷಿಸಿದ್ದು, ಎಲ್ಲಾ ಸಾರಿಗೆ ನೌಕರರು ಈ ಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ತಿಳಿಸಿದರು.
ಈಮಧ್ಯೆ, ಸಾರಿಗೆ ನೌಕರರ ಮುಷ್ಕರ ವೇಳೆ, ಹುಬ್ಬಳ್ಳಿಯಿಂದ ಹೊಸಪೇಟೆಗೆ ಹೋಗುತ್ತಿದ್ದ ಬಸ್ ಮೇಲೆ ಮಾಸ್ಕ್ ಧರಿಸಿದ್ದ ಇಬ್ಬರು ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇಂದು ಬೆಳಗ್ಗೆ 7.15ರ ಸುಮಾರಿಗೆ ಹುಬ್ಬಳ್ಳಿ-ಗದಗ ಬೈಪಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹುಬ್ಬಳ್ಳಿಯಿಂದ ಹೊಸಪೇಟೆಗೆ ಹೋಗುತ್ತಿದ್ದ ಬಸ್ ಅನ್ನು ಬೈಕ್‌ನಲ್ಲಿ ಹಿಂಬಾಲಿಸಿದ ಇಬ್ಬರು ಮುಸುಕುಧಾರಿ ವ್ಯಕ್ತಿಗಳು, ಬಸ್ ಮುಂದೆ ಬಂದು ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಬಸ್‌ನಲ್ಲಿ ಕೇವಲ 20-25 ಪ್ರಯಾಣಿಕರು ಮಾತ್ರ ಇದ್ದುದರಿಂದ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಇನ್ನು ಕೋಲಾರ ನಗರದ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಕೆಎಸ್ಆರ್ಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ.
ಧರ್ಮಸ್ಥಳ ತಾಲ್ಲೂಕಿನಲ್ಲಿ ರಹಸ್ಯವಾಗಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 7ನೇ ದಿನವೂ ಎಸ್ಐಟಿ ತಂಡ ಸಮಾಧಿ ಅಗೆಯುವ ಕಾರ್ಯದಲ್ಲಿ ತೊಡಗಿತ್ತು. ಎಸ್‌ಐಟಿಯ ತನಿಖಾಧಿಕಾರಿ ಮತ್ತು ಪುತ್ತೂರು ವಿಭಾಗದ ಸಹಾಯಕ ಆಯುಕ್ತ ನಸ್ಟೆಲ್ಲಾ ವರ್ಗೀಸ್ ಮೇಲ್ವಿಚಾರಣೆಯಲ್ಲಿ ಸಾಕ್ಷಿ-ದೂರುದಾರನು ತೋರಿಸಿದ ಸ್ಥಳ ಸಂಖ್ಯೆ 11 ಮತ್ತು 12 ರಲ್ಲಿ ಭಾರೀ ಮಳೆಯ ನಡುವೆಯೂ ಅಗೆಯುವ ಪ್ರಕ್ರಿಯೆ ನಡೆಯಿತು. ಆದರೆ ಯಾವುದೇ ಅವಶೇಷಗಳ ಕುರುಹು ಪತ್ತೆಯಾಗಿಲ್ಲ. ಆದರೆ ಇಲ್ಲಿಯವರೆಗೆ, ಎಸ್‌ಐಟಿ ಅಗೆದ 12 ಸ್ಥಳಗಳಲ್ಲಿ ಒಂದು ಸ್ಥಳದಲ್ಲಿ ಮಾತ್ರ ಮಾನವ ಅವಶೇಷಗಳು ಪತ್ತೆಯಾಗಿದ್ದು ಪಾಯಿಂಟ್ 13 ಮಾತ್ರ ಬಾಕಿ ಇದೆ. ಈಮಧ್ಯೆ, 2003ರಲ್ಲಿ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದ MBBS ವಿದ್ಯಾರ್ಥಿನಿ ಅನನ್ಯ ಭಟ್ ತಾಯಿ ಸುಜಾತಾ ಭಟ್ ಪರ ವಕೀಲರು ನಿನ್ನೆ ಸಮಾಧಿ ಅಗೆದ ಸ್ಥಳದಲ್ಲಿ ಮೂರು ಮಾನವ ಅವಶೇಷಗಳು ಪತ್ತೆಯಾಗಿವೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಜಯಂತ್ ಎಂಬುವರು ಧರ್ಮಸ್ಥಳ ಠಾಣೆಗೆ ನೀಡಿದ್ದ ದೂರನ್ನು ಎಸ್ಐಟಿಗೆ ಹಸ್ತಾಂತರಿಸಲಾಗಿದೆ.
ಬೆಂಗಳೂರಿನಲ್ಲಿ ನಿನ್ನೆ ಧಾರಾಕಾರ ಮಳೆಯಾಗಿದ್ದು ಮುಂದಿನ ಮೂರು ದಿನಗಳ ಕಾಲ ನಗರ ಸೇರಿದಂತೆ ದಕ್ಷಿಣ ಕರ್ನಾಟಕದಾದ್ಯಂತ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರದಲ್ಲಿ ಕಳೆದ ರಾತ್ರಿ ಸುರಿದ 45 ಮಿಮೀ ಮಳೆಯಿಂದ ಕಸ್ತೂರಿನಗರದ ಬಿಡಿಎ ಲೇಔಟ್‌ನಲ್ಲಿ 20 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತು. ಮಳೆಯಿಂದಾಗಿ ಮುಖ್ಯ ರಸ್ತೆಗಳು ಜಲಾವೃತಗೊಂಡವು, ಹೊಸಕೋಟೆಗೆ ಹೋಗುವ ರಾಮಮೂರ್ತಿ ನಗರ ರಸ್ತೆ ಮತ್ತು ಹೊಸೂರು ರಸ್ತೆಯ ಬಳಿಯ ವೀರಸಂದ್ರದಲ್ಲಿ ಸಂಚಾರಕ್ಕೆ ಅಡ್ಡಿಯಾಯಿತು. ಕಸ್ತೂರಿನಗರ ನಿವಾಸಿಗಳ ಪ್ರಕಾರ, ಮಧ್ಯರಾತ್ರಿ ಜಾವ 12.30 ರ ಸುಮಾರಿಗೆ ಚರಂಡಿಗಳಿಂದ ನೀರು ಹೊರಬಂದು ರಸ್ತೆಗಳಿಗೆ ಮತ್ತು ಮನೆಗಳಿಗೆ ನುಗ್ಗಿ, ಸಂಪ್‌ಗಳು, ನೆಲಮಾಳಿಗೆಗಳು, ಲಿಫ್ಟ್‌ಗಳು ಮತ್ತು ಪೀಠೋಪಕರಣಗಳಿಗೆ ಹಾನಿಯಾಗಿದೆ.
ಚಿತ್ರದುರ್ಗದ ಪ್ರಧಾನ ಅಂಚೆ ಕಚೇರಿ ಬಳಿ ಎರಡು ಬಸ್ ಗಳ ನಡುವೆ ಸಿಲುಕಿ ಆಟೋವೊಂದು ನಜ್ಜುಗುಜ್ಜಾಗಿದು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ನವೀನ್, ಪೂಜಾ, ನಿಂಗರಾಜು ಮತ್ತು ಮಹಾಂತೇಶ್ ಅವರಿಗೆ ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.