ಸಚಿವ ಕೃಷ್ಣ ಬೈರೇಗೌಡ 
ರಾಜ್ಯ

ಲಕ್ಷಾಂತರ ರೈತರು PM ಕಿಸಾನ್ ಸಮ್ಮಾನ್ ಯೋಜನೆಯಿಂದ ವಂಚಿತ; 'ಪೌತಿ ಖಾತಾ' ಅಭಿಯಾನ ಚುರುಕುಗೊಳಿಸಿ: ಅಧಿಕಾರಿಗಳಿಗೆ ಸರ್ಕಾರ ಸೂಚನೆ

ರಾಜ್ಯದಲ್ಲಿ ಸುಮಾರು 52 ಲಕ್ಷ ಭೂಮಿಗಳು ಇನ್ನೂ ಮೃತ ವ್ಯಕ್ತಿಗಳ ಹೆಸರಿನಲ್ಲಿವೆ. ‘ಮೃತರ ಹೆಸರಿನಲ್ಲಿರುವ ಜಮೀನುಗಳಿಗೆ ಪಿ.ಎಂ ಕಿಸಾನ್, ಹನಿ ನೀರಾವರಿ ಹಾಗೂ ಯಂತ್ರೋಪಕರಣ ಖರೀದಿ ಸಬ್ಸಿಡಿ ನೀಡದಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು: ಲಕ್ಷಾಂತರ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ವಂಚಿತರಾಗುತ್ತಿದ್ದು, 'ಪಾವತಿ ಖಾತಾ' ಅಭಿಯಾನವನ್ನು ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೈಗೌಡ ಅವರು ಸೋಮವಾರ ಸೂಚನೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 52 ಲಕ್ಷ ಭೂಮಿಗಳು ಇನ್ನೂ ಮೃತ ವ್ಯಕ್ತಿಗಳ ಹೆಸರಿನಲ್ಲಿವೆ. ‘ಮೃತರ ಹೆಸರಿನಲ್ಲಿರುವ ಜಮೀನುಗಳಿಗೆ ಪಿ.ಎಂ ಕಿಸಾನ್, ಹನಿ ನೀರಾವರಿ ಹಾಗೂ ಯಂತ್ರೋಪಕರಣ ಖರೀದಿ ಸಬ್ಸಿಡಿ ನೀಡದಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರದ ಈ ಆದೇಶದಿಂದ ಮೃತ ರೈತರ ಕುಟುಂಬಗಳಿಗೆ ತೊಂದರೆಯಾಗುತ್ತದೆ. ಹಾಗಾಗಿ, ಕಂದಾಯ ಇಲಾಖೆ ಅಧಿಕಾರಿಗಳೇ ರೈತರ ಮನೆ ಬಾಗಿಲಿಗೆ ತೆರಳಿ ಪೌತಿಖಾತೆ ಮಾಡಿಕೊಡಲಿದ್ದಾರೆ. ಈಗಾಗಲೇ 2.30 ಲಕ್ಷ ಪಹಣಿಗಳನ್ನು ಖಾತೆ ಮಾಡಲಾಗಿದೆ. ಪ್ರಗತಿ ಸಾಧಿಸುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ಪ್ರತಿ ಪ್ರಕರಣಕ್ಕೂ ರೂ.6 ನೀಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಅಭಿಯಾನಕ್ಕೆ ಮತ್ತಷ್ಟು ವೇಗ ತುಂಬಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕರ್ತವ್ಯ ನಿರ್ವಹಿಸಲು ನಿರ್ದಿಷ್ಟ ಕಚೇರಿಗಳಿಲ್ಲದ ಗ್ರಾಮ ಆಡಳಿತ ಅಧಿಕಾರಿಗಳಿಗೆ (ವಿಎಒ) ಗ್ರಾಮ ಪಂಚಾಯಿತಿಗಳಲ್ಲಿ ಕಚೇರಿಗಳನ್ನು ನೀಡಲಾಗಿದೆ. "ರಾಜ್ಯದಲ್ಲಿ 7,500 ಗ್ರಾಮ ಆಡಳಿತ ಅಧಿಕಾರಿ ವೃತ್ತಗಳಿದ್ದು, 8357 ಅಧಿಕಾರಿಗಳು ಅವುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ದಶಕಗಳಿಂದ ಕಚೇರಿ ಇಲ್ಲ. ಒಂದೆಡೆ, ವಿಎಒಗಳು ಲಭ್ಯವಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದರೆ, ಮತ್ತೊಂದೆಡೆ, ವಿಎಒಗಳು ಕಚೇರಿ ಸೌಲಭ್ಯಗಳು ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಜಿಲ್ಲಾಧಿಕಾರಿಗಳು ಮತ್ತು ಆರ್‌ಡಿಪಿಆರ್ ಸಚಿವರೊಂದಿಗೆ ಚರ್ಚಿಸಿದ ನಂತರ, ಕೇವಲ ನಾಲ್ಕು ತಿಂಗಳಲ್ಲಿ ಗ್ರಾಮ ಪಂಚಾಯತ್ ಕಚೇರಿಯಲ್ಲೇ 7405 ವಿಎಒಗಳಿಗೆ ಕಚೇರಿ ಸೌಲಭ್ಯಗಳನ್ನು ಒದಗಿಸಲಾಗಿದೆ, 952 ವಿಎಒಗಳಿಗೆ ಕಚೇರಿಗಳನ್ನು ಒದಗಿಸುವುದು ಇನ್ನೂ ಬಾಕಿ ಇದೆ, ಶೀಘ್ರದಲ್ಲೇ ಅವರಿಗೆ ಕಚೇರಿಗಳನ್ನು ಒದಗಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ನಾಲ್ಕು ತಿಂಗಳಲ್ಲಿ ಎಲ್ಲ ವಿ.ಎ.ಗಳಿಗೆ ಲ್ಯಾಪ್​ಟಾಪ್ ಕೊಡುತ್ತೇವೆ. ಈಗಾಗಲೇ ಸುಮಾರು 4,000 ಲ್ಯಾಪ್​ಟಾಪ್‌ಗಳನ್ನು ಕೊಟ್ಟಿದ್ದೇವೆ. ವಿ.ಎ.ಗಳಿಂದ ಹಿಡಿದು ಸಚಿವರವರೆಗೆ ಇ-ಕಚೇರಿ ಕಡ್ಡಾಯವಾಗಿ ಬಳಕೆ ಮಾಡಲು ತೀರ್ಮಾನಿಸಲಾಗಿದೆ. ಕಾಗದರಹಿತ ವಹಿವಾಟಿಗಾಗಿ ಒಂದು ತಿಂಗಳಲ್ಲಿ ಕಡ್ಡಾಯವಾಗಿ ಇ-ಕಚೇರಿ ಅಳವಡಿಕೆಗೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಜಮೀನು ಮಂಜೂರಾಗಿ ಪೋಡಿ ಆಗದೆ ಜನರು ಅಲೆದಾಡುತ್ತಿದ್ದಾರೆ. ಹಿಂದಿನ ಐದು ವರ್ಷ ಪೋಡಿ ಆಗಿರುವುದು ಸರಾಸರಿ 5,000-8000 ಪ್ರಕರಣ. ನಮ್ಮ ಸರ್ಕಾರ ಪೋಡಿ ಪ್ರಕ್ರಿಯೆಯನ್ನು ಆನ್​ಲೈನ್​ಗೆ ತಂದಿದೆ. ನನ್ನ ಭೂಮಿ ಕಾರ್ಯಕ್ರಮ ಕೈಗೆತ್ತಿಕೊಂಡು, ಕಳೆದ ಏಳು ತಿಂಗಳಲ್ಲಿ 1,09,000 ಪ್ರಕರಣಗಳನ್ನು ಅಳತೆಗೆ ತೆಗೆದುಕೊಂಡು ಪೋಡಿ ಮಾಡಲಾಗುತ್ತಿದೆ. 1,26,000 ಮಿಸ್ಸಿಂಗ್ ರೆಕಾರ್ಡ್ ಸಮಿತಿಗೆ ಶಿಫಾರಸು ಆಗಿದೆ. ಕನಿಷ್ಠ ಎರಡು ದಾಖಲೆ ಕೊಟ್ಟರೆ ಅದನ್ನು ಪರಿಗಣಿಸಲು ಸೂಚಿಸಲಾಗಿದೆ. 1,26,000 ಮಿಸ್ಸಿಂಗ್ ರೆಕಾರ್ಡ್ಸ್ ಸಮಿತಿಗೆ ಹೋಗಿದೆ. ಎರಡು ತಿಂಗಳಲ್ಲಿ 35,000 ಪ್ರಕರಣಗಳನ್ನು ವಿಲೇ ಮಾಡಲು ಸೂಚನೆ ನೀಡಲಾಗಿದೆ.

ಡಿಸೆಂಬರ್ ಅಂತ್ಯಕ್ಕೆ ಎರಡು ಲಕ್ಷ ಪ್ರಕರಣಗಳನ್ನು ಪೋಡಿ ಮಾಡುವ ಗುರಿ ಹೊಂದಲಾಗಿದೆ. ಇದರಿಂದ ಸುಮಾರು 7 ಲಕ್ಷ ರೈತ ಕುಟುಂಬಕ್ಕೆ ಇದರ ಲಾಭ ಆಗಲಿದೆ. ಸುಮಾರು 30 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಈ ಹಿಂದೆ ಏಕ ವ್ಯಕ್ತಿ ಪೋಡಿ ಮಾಡಲಾಗುತ್ತಿತ್ತು. ಈ ಹಿಂದೆ ಅವರು ಅರ್ಜಿ ಹಾಕಬೇಕಾಗಿತ್ತು. ಈಗ ಸರ್ಕಾರ ಸ್ವಯಂಪ್ರೇರಿತವಾಗಿ ಅರ್ಜಿ ಇಲ್ಲದೆ ದರ್ಖಾಸ್ತು ಪೋಡಿ ಕಾರ್ಯ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಹಾಡಿ, ಹಟ್ಟಿ, ತಾಂಡಾ, ಮಜರೆ ಗ್ರಾಮಗಳಲ್ಲಿ ವಾಸಿಸುತ್ತಿರುವವರು ಸಾಮಾಜಿಕವಾಗಿ ಹಾಗೂ ಆರ್ಥಿವಾಗಿ ಸಾಕಷ್ಟು ಹಿಂದುಳಿದವರು. ಆದರೆ, ಈ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸದ ಕಾರಣ ದಶಕಗಳಿಂದಲೂ ಇವರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹೀಗಾಗಿ ಇಂತಹ ದಾಖಲೆ ರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕೆಲಸವನ್ನು ಸರ್ಕಾರ ಕಳೆದ ಎರಡು ವರ್ಷಗಳಿಂದ ಅಭಿಯಾನ ಮಾದರಿಯಲ್ಲಿ ಮುನ್ನಡೆಸುತ್ತಿದೆ ಎಂದು ತಿಳಿಸಿದರು.

ಸಾಂಪ್ರದಾಯಿಕ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ 2017ರಲ್ಲೇ ಅಂದಿನ ಕಾಂಗ್ರೆಸ್ ಸರ್ಕಾರ ಸೂಕ್ತ ಕಾನೂನು ರಚಿಸಿತ್ತು. ಆದರೆ, ಹಿಂದಿನ ಸರ್ಕಾರ ಈ ಕಾನೂನನ್ನು 2023ರ ವರೆಗೆ ಸಮರ್ಪಕವಾಗಿ ಅನುಷ್ಠಾನಗೊಳಿಸಿರಲ್ಲ. ಈ ಅವಧಿಯಲ್ಲಿ ಕೇವಲ 2,626 ಗ್ರಾಮಗಳನ್ನು ಮಾತ್ರ ಗುರುತಿಸಲಾಗಿತ್ತು. 1500 ಗ್ರಾಮಗಳನ್ನು ಮಾತ್ರ ಕಂದಾಯ ಗ್ರಾಮ ಎಂದು ಘೋಷಿಸಲಾಗಿತ್ತು. 2023ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದಿನ ಸರ್ಕಾರದ ಅವಧಿಯಲ್ಲಿ ಅರ್ಹತೆ ಇದ್ದಾಗಿಯೂ ಬಿಟ್ಟುಹೋಗಿದ್ದ 4,250 ಅರ್ಹ ದಾಖಲೆರಹಿತ ಜನವಸತಿ ಪ್ರದೇಶಗಳನ್ನು ಗುರುತಿಸಲಾಗಿದೆ. ಡಿಸೆಂಬರ್ ಒಳಗೆ ಇಷ್ಟೂ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಸೂಚಿಸಲಾಗಿದೆ ಎಂದರು.

ಈಗಾಗಲೇ ಕಳೆದ ಮೇ ತಿಂಗಳಲ್ಲಿ ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಗ್ರಾಮಗಳ 1.11 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಇನ್ನೂ 1.62 ಲಕ್ಷ ಕುಟುಂಬದ ಫಲಾನುಭವಿಗಳಿಗೆ ಇ-ಖಾತಾ ನೋಂದಣಿ ಮಾಡಿಸಿದ ಪಕ್ಕಾ ಹಕ್ಕುಪತ್ರ ನೀಡುವ ಗುರಿಯನ್ನು ನವೆಂಬರ್ ತಿಂಗಳ ಅಂತ್ಯದೊಳಗೆ ಯಶಸ್ವಿಗೊಳಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಗುರಿ ನೀಡಲಾಗಿದೆ ಎಂದರು.

ಪ್ರಸ್ತುತ ವರ್ಷ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ. ಒಂದೆರಡು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದ್ದರೆ, 6-7 ಜಿಲ್ಲೆಗಳಲ್ಲಿ ವಾಡಿಕೆಗಿಂತ ತುಸು ಕಡಿಮೆ ಮಳೆಯಾಗಿದೆ. ಕಡಿಮೆ ಮಳೆಯಾಗಿರುವ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವ ಸೂಚನೆ ಇದೆ. ಆಗಸ್ಟ್ ಅಂತ್ಯದ ವೇಳೆಗೆ ಮಳೆ ಪ್ರಮಾಣ ಈ ಭಾಗಗಳಲ್ಲಿ ಸುಧಾರಣೆಯಾಗಲಿದೆ. ಪ್ರಸ್ತುತ ಜಲಾಶಯಗಳಿಗೆ ಒಳಹರಿವು ಉತ್ತಮವಾಗಿದೆ. ಆದರೆ, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲೂ ಪರಿಸ್ಥಿತಿ ಹೀಗೆ ಇರುತ್ತದೆ ಎಂದು ಹೇಳಲಾಗದು. ಹೀಗಾಗಿ ಜಿಲ್ಲಾಧಿಕಾರಿಗಳು ಜಲಾಶಯಗಳಲ್ಲಿನ ನೀರಿನ ಬಳಕೆಯ ಮೇಲೆ ಹೆಚ್ಚು ನಿಗಾವಹಿಸುವುದು ಉತ್ತಮ. ನೀರಿನ ಬಳಕೆ ಎಚ್ಚರಿಕೆಯಿಂದ ಉಪಯೋಗಿಸಬೇಕು. ಮುಂದೆ ಒಳಹರಿವು ಕಡಿಮೆ ಆಗುವ ಸಾಧ್ಯತೆ ಇರುವುದರಿಂದ ನೀರಿನ ನಿರ್ವಹಣೆ ಪ್ರಮುಖವಾಗಿದೆ. ಹಾಗಾಗಿ ಎಚ್ಚರಿಕೆಯಿಂದ ನಿರ್ವಹಣೆ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT