ಧರ್ಮಸ್ಥಳ: ಧರ್ಮಸ್ಥಳದ ಪರಿಸರದಲ್ಲಿ ನೂರಾರು ಶವಗಳನ್ನು ಹೂತಿರುತ್ತೇನೆ ಎಂದು ಆಪಾದಿಸಿ ಸ್ಥಳಗಳನ್ನು ತೋರಿಸುತ್ತಿರುವ ಅನಾಮಿಕ ವ್ಯಕ್ತಿಯನ್ನು SIT ವಶದಲ್ಲಿ ಇರಿಸಿಕೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಶ್ಯಾಮ್ ಸುಂದರ್ ಎಂಬವರು ತನಿಖಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಎಸ್ ಐಟಿಗೆ ಪತ್ರ ಬರೆದಿರುವ ಶ್ಯಾಮ್ ಸುಂದರ್, ಪ್ರಕರಣದ ನಿಷ್ಪಕ್ಷಪಾತ ತನಿಖೆಯ ಬಗ್ಗೆ ಸ್ಥಳೀಯ ವ್ಯಕ್ತಿಯಾಗಿರುವ ನನಗೆ ಕಳವಳವಿದೆ. ಕೆಲವು ಮಾಧ್ಯಮ ವರದಿಗಳ ಮಾಹಿತಿ ಪ್ರಕಾರ, ಸಾಕ್ಷಿ-ದೂರುದಾರ ತಮ್ಮ ವಕೀಲರು ಎಂದು ಹೇಳಿಕೊಳ್ಳುವ ವ್ಯಕ್ತಿಗಳೊಂದಿಗೆ ಸಮಾಧಿ ಸ್ಥಳಗಳೆಂದು ಗುರುತಿಸಲಾದ ಸ್ಥಳಗಳಿಗೆ ಆಗಮಿಸುತ್ತಾರೆ ಎನ್ನಲಾಗಿದೆ.
ಸಾಕ್ಷಿದಾರ ಮಂಗಳೂರಿನ ಹೋಟೆಲ್‌ಗಳಲ್ಲಿ ಉಳಿದುಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲದೇ ಕೆಲ ದಿನಗಳ ಹಿಂದೆ ಅವರು ಉಜಿರೆಯ ಖಾಸಗಿ ವ್ಯಕ್ತಿಯ ಮನೆಯಲ್ಲಿ ತಂಗಿದ್ದರು ಎಂದು ಎಂಬ ಮಾಹಿತಿ ತಿಳಿದುಬಂದಿದೆ ಅವರು ತಿಳಿಸಿದ್ದಾರೆ.
ಗುರುತನ್ನು ಮರೆಮಾಚಿರುವ ಮಾಹಿತಿದಾರ ಅಥವಾ ಸಾಕ್ಷಿ-ದೂರುದಾರರನ್ನು ಖಾಸಗಿ ವ್ಯಕ್ತಿಗಳು ಮತ್ತು ವಕೀಲರ ವಶದಲ್ಲಿ ಇರಿಸಿದರೆ ಅಂತಹ ಗಂಭೀರ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಯನ್ನು ನಾವು ಹೇಗೆ ನಿರೀಕ್ಷಿಸಬಹುದು? ಎಂದು ಅವರು ಪ್ರಶ್ನಿಸಿದ್ದಾರೆ.
ಪಾರದರ್ಶಕ ತನಿಖೆ ನಡೆಸಲು ಸಾಕ್ಷಿ-ದೂರುದಾರರನ್ನು ತಮ್ಮ ಕಸ್ಟಡಿಯಲ್ಲಿ ಇರಿಸಿಕೊಳ್ಳುವಂತೆ ಎಸ್‌ಐಟಿಗೆ ಮನವಿ ಮಾಡಿದ್ದಾರೆ. ಈ ಮಧ್ಯೆ ಅವರು ಅರ್ಜಿಯನ್ನು ಸ್ವೀಕರಿಸಿದ್ದು, ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.