ಚಾಮರಾಜನಗರ: ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ಸೆಸ್ ಹೆಚ್ಚಿಸುವುವಂತೆ ರಾಜ್ಯ ಸರ್ಕಾಪಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಬುಧವಾರ ಮನವಿ ಮಾಡಿದ್ದಾರೆ.
ನಗರದ ಕಲಾಮಂದಿರದಲ್ಲಿ ಬುಧವಾರ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್, ಮೈಸೂರು ಇವರ ಸಹಯೋಗದಲ್ಲಿ ಮೈಸೂರು ಜಿಲ್ಲೆಯ ವಿವಿಧ ಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್’’ ವಿತರಣೆ ಮತ್ತು ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ರಾಜ್ಯ ಸರಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಹೆಚ್ಚುವರಿಯಾಗಿ 50 ಪೈಸೆಯಿಂದ 1 ರೂ. ಸೆಸ್ ವಿಸುವ ಮೂಲಕ ಸಂಗ್ರಹವಾಗುವ ಹಣವನ್ನು ಕಾರ್ಮಿಕ ಕಲ್ಯಾಣಕ್ಕೆ ನೀಡಬೇಕು ಎಂದು ಮನವಿ ಮಾಡಿದರು.
ದೇಶದಲ್ಲಿ ಶೇ. 90ರಷ್ಟು ಮಂದಿ ಅಸಂಘಟಿತ ವಲಯದಲ್ಲಿದ್ದಾರೆ. ರಾಜ್ಯದಲ್ಲಿ ಶೇ. 83ರಷ್ಟು ಅಸಂಘಟಿತ ವಲಯದ ಕಾರ್ಮಿಕರಿದ್ದು, ಅವರಿಗೆ ಸಾಮಾಜಿಕ ಭದ್ರತೆಯೊಂದಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕಾಗಿದೆ. ಅದಕ್ಕೆ ಸಾವಿರಾರು ಕೋಟಿ ರೂ. ಅಗತ್ಯವಾಗಿದ್ದು, ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಹೆಚ್ಚುವರಿಯಾಗಿ ಸೆಸ್ ವಿಧಿಸುವ ಮೂಲಕ ಹಣ ಸಂಗ್ರಹಿಸಿ ಕಾರ್ಮಿಕರ ಕಲ್ಯಾಣಕ್ಕೆ ನೀಡಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಸಾರಿಗೆ ವಲಯದಲ್ಲಿ 25 ಲಕ್ಷಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಟ್ರಾನ್ಸ್‌ಪೋರ್ಟ್ ಬೋರ್ಡ್‌ನಿಂದ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. ಅಪಘಾತದಿಂದ ಕಾರ್ಮಿಕರು ಮೃತಪಟ್ಟರೆ ಅವರ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ಸಿಗಲಿದೆ. ಮನೆಗೆಲಸ ಮಾಡುವ ಮಹಿಳೆಯರಿಗೆ ಕನಿಷ್ಠ ವೇತನ ಸಿಗುವಂತೆ ಮಾಡಲು ಕಾನೂನು ರೂಪಿಸಲಾಗುತ್ತಿದೆ. ಸರಕಾರಿ ಸೇರಿದಂತೆ ಖಾಸಗಿ ಕ್ಷೇತ್ರಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ನೌಕರರಿಗೆ ಸೊಸೈಟಿಯನ್ನು ಸ್ಥಾಪಿಸಲಾಗುತ್ತಿದೆ. ಇದರ ಮೂಲಕ ಹೊರ ಗುತ್ತಿಗೆ ನೌಕರರಿಗೆ ಯಾವುದೇ ಅನ್ಯಾಯವಾಗದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಕೈಗಾರಿಕೋದ್ಯಮಿಗಳ ರೂ.15 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಕ್ಕೆ ಕೇಂದ್ರ ಸರ್ಕಾರವನ್ನು ಟೀಕಿಸಿದರು, ಶಕ್ತಿ ಯೋಜನೆಯನ್ನು ಶ್ಲಾಘಿಸಿದರು.
ವಿರೋಧದ ನಡುವೆಯೂ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಲು ಶ್ರಮಿಸುತ್ತಿರುವ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಜನರು ನಂಬಿಕೆ ಇಡಬೇಕೆಂದು ಒತ್ತಾಯಿಸಿದರು.