ಬೆಂಗಳೂರು: ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು, ಮಗುವಿಗೆ ಜನ್ಮ ನೀಡಿದ 2 ದನಗಳ ಬಳಿಕ ಸಾವನ್ನಪ್ಪಿರುವ ಘಟನೆಯೊಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಮಂಡ್ಯ ಮೂಲದ ತನುಶ್ರೀ (27) ಮೃತ ಮಹಿಳೆ. ಮಹಿಳೆಯನ್ನು ಭಾನುವಾರ ಕೋಣನಕುಂಟೆ ಕ್ರಾಸ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಆರಂಭದಲ್ಲಿ ಸಾಮಾನ್ಯ ಹೆರಿಗೆಯಾಗುವುದಾಗಿ ಭರವಸೆ ನೀಡಿದ್ದರು. ಬಳಿಕ ಸಿಸೇರಿಯನ್ ಅಗತ್ಯವಿದೆ ಎಂದು ತಿಳಿಸಿದರು. ನಂತರ ತನುಶ್ರೀ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಶಸ್ತ್ರಚಿಕಿತ್ಸೆಯ ನಂತರ, ತನುಶ್ರೀ ಅವರ ಮೂಗಿನಿಂದ ರಕ್ತಸ್ರಾವವಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿತು. ಕೂಡಲೇ ಆಸ್ಪತ್ರೆ ಸಿಬ್ಬಂದಿಗಳಿಗೆ ತಿಳಿಸಲಾಗಿತ್ತು. ಆದರೆ, ಅವರು ನಿರ್ಲಕ್ಷ್ಯ ತೋರಿದರು. ಬಳಿಕ ತನುಶ್ರೀ ಸ್ಥಿತಿ ಹದಗೆಡುತ್ತಲೇ ಹೋಯಿತು. ಆಸ್ಪತ್ರೆಯವರ ನಿರ್ಲಕ್ಷ್ಯದಿಂದ ಬುಧವಾರ ನಿಧನಳಾದಳು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ, ವೈದ್ಯಕೀಯ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆಗಿಳಿದಿದ್ದಾರೆ.
ತನುಶ್ರೀ ಸಾವಿಗೆ ಆಸ್ಪತ್ರೆಯವರು ನಮಗೆ ತಿಳಿಸಲೇ ಇಲ್ಲ. ಬದಲಿಗೆ 1.5 ಲಕ್ಷ ರೂ.ಗಳ ಬಿಲ್ ನೀಡಿದರು. ಸಾವಿಗೆ ಕಾರಣ ತಿಳಿಸಿಲ್ಲ. ಸಿ-ಸೆಕ್ಷನ್ ಆಗುತ್ತದೆ ಎಂದು ಆಸ್ಪತ್ರೆ ಅಧಿಕಾರಿಗಳು ನಮಗೆ ತಿಳಿಸಿರಲಿಲ್ಲ. ಸೋಮವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ಬಂದು ಶಸ್ತ್ರಚಿಕಿತ್ಸೆ ಮಾಡಿಸುವಂತೆ ಒತ್ತಾಯಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದು, ಹೆಚ್ಚಿನ ತನಿಖೆಗಾಗಿ ಎಫ್‌ಐಆರ್ ಅನ್ನು ವೈದ್ಯಕೀಯ ಮಂಡಳಿಗೆ ಕಳುಹಿಸಿದ್ದಾರೆ.