ಬೆಂಗಳೂರು: ಮುಂಬೈ ಮೂಲದ ಕುಖ್ಯಾತ ಕಳ್ಳ ಶೇಖ್ ಸಲೀಂ ಅಲಿಯಾಸ್ ಸಲೀಂ ಪೊಲೀಸ್ ಸಮವಸ್ತ್ರ ಧರಿಸಿರುವ ಫೋಟೋ ಹಾಗೂ ವಿಡಿಯೋಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕರ್ತವ್ಯಲೋಪದ ಆರೋಪದ ಮೇರೆಗೆ ಗೋವಿಂದ ಪುರ ಠಾಣೆಯ ಪೇದೆಯೊಬ್ಬರ ತಲೆದಂಡವಾಗಿದೆ.
ಮುಂಬೈನ ವೃತ್ತಿಪರ ಖದೀಮ ಸಲೀಂ ಅಲಿಯಾಸ್ ಶೇಕ್ ಸಲೀಂ ಬಂಧಿತ. ತನಿಖಾ ಸಂದರ್ಭದಲ್ಲಿ ಸಮವಸ್ತ್ರ ಧರಿಸಲು ಅವಕಾಶ ನೀಡಿ ಕರ್ತವ್ಯ ಲೋಪವೆಸಗಿದ ಆರೋಪದ ಮೇರೆಗೆ ಗೋವಿಂದಪುರ ಠಾಣೆ ಕಾನ್‌ಸ್ಟೇಬಲ್ ಎಚ್.ಆರ್.ಸೋನಾರ್ ಅವರನ್ನು ಡಿ.ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಅಮಾನತುಗೊಳಿಸಿದ್ದಾರೆ.
ಜೂನ್ 23 ರಂದು ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಕ್ ಸಲೀಂನನ್ನು ಬಂಧನಕ್ಕೊಳಪಡಿಸಲಾಗಿತ್ತು. ಈ ವೇಳೆ ಆತನಿಂದ ಮೊಬೈಲ್ ವಶಕ್ಕೆ ಪಡೆಯಲಾಗಿತ್ತು.
ಫೋನ್ ಪರಿಶೀಲಿಸಿದಾಗ, ಕಾನ್‌ಸ್ಟೆಬಲ್ ಎಚ್‌ಆರ್ ಸೋನಾರ್ ಎಂಬ ಹೆಸರಿನ ಫಲಕ ಹೊಂದಿರುವ ಪೊಲೀಸ್ ಸಮವಸ್ತ್ರದಲ್ಲಿ ಕಳ್ಳ ಪೋಸ್ ನೀಡುತ್ತಿರುವ ಚಿತ್ರಗಳು, ವಿಡಿಯೋಗಳು ಪತ್ತೆಯಾಗಿತ್ತು. ಆರೋಪಿ ಪೊಲೀಸ್ ಸಮವಸ್ತ್ರದಲ್ಲಿ ತನ್ನ ಪತ್ನಿಗೆ ವೀಡಿಯೊ ಕರೆ ಮಾಡಿರುವುದು ಕಂಡು ಬಂದಿತ್ತು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಡಿಸಿಪಿ (ಪೂರ್ವ) ಡಿ ದೇವರಾಜ ಅವರು ಆಂತರಿಕ ತನಿಖೆ ನಡೆಸಿದ್ದು, ಈ ವೇಳೆ ವರ್ಷದ ಹಿಂದೆ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದ ವೇಳೆ ಹೋಟೆಲ್ ವೊಂದರಲ್ಲಿ ಕಸ್ಟಡಿಯಲ್ಲಿರಿಸಿದ್ದಾಗ ಆರೋಪಿ ಪೊಲೀಸ್ ಸಮವಸ್ತ್ರ ಧರಿಸಿ, ಫೋಟೋ ತೆಗೆದುಕೊಂಡಿದ್ದಾನೆಂಬುದು ತಿಳಿದುಬಂದಿದೆ.
ಹೋಟೆಲ್ ನಲ್ಲಿ ಕಸ್ಟಡಿಯಲ್ಲಿಸಿದ್ದ ವೇಳೆ ಕಾನ್‌ಸ್ಟೆಬಲ್ ಸೋನಾರ್ ಅವರು ಸಮವಸ್ತ್ರ ತೆಗೆದಿರಿಸಿದ್ದ ವೇಳೆ ಆರೋಪಿ ಸಮವಸ್ತ್ರ ಧರಿಸಿ ಪತ್ನಿಗೆ ವೀಡಿಯೋ ಕರೆ ಮಾಡಿದ್ದಾನೆಂದು ತಿಳಿದುಬಂದಿದೆ. ಇದೀಗ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಸೋನಾರ್ ಅವರನ್ನು ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ.
ಸಲೀಂ ಬೆಂಗಳೂರು, ಮುಂಬೈ ಮತ್ತು ಪುಣೆಯಲ್ಲಿ ಕಳ್ಳತನಗಳನ್ನು ಮಾಡಿದ್ದಾನೆ. 2021 ರಲ್ಲಿ, ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಕೇಂದ್ರ ಅಪರಾಧ ದಳ(ಸಿಸಿಬಿ) ನಡೆಸಿದ ದಾಳಿಯ ಸಮಯದಲ್ಲಿ, ಆರೋಪಿ ಜೈಲಿನೊಳಗಿಂದಲೇ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿತ್ತು. ಮೊಬೈಲ್ ಫೋನ್ ಮೂಲಕ ತನ್ನ ಗ್ಯಾಂಗ್‌ಗೆ ಸೂಚನೆಗಳನ್ನು ನೀಡುತ್ತಿರುವುದು ಕಂಡುಬಂದಿತ್ತು.
ಜೈಲಿನೊಳಗೆ ಒಂದು ತಂಡವನ್ನು ರಚಿಸುತ್ತಿದ್ದ ಆರೋಪಿ, ಜಾಮೀನು ಪಡೆದ ನಂತರ, ಅವರಿಗೆ ತರಬೇತಿ ನೀಡಿ ರಾತ್ರಿಯಲ್ಲಿ ಕಳ್ಳತನಗಳನ್ನು ಮಾಡುತ್ತಿದ್ದ ಎನ್ನಲಾಗಿದೆ.