ಬೆಂಗಳೂರು: ಕರ್ನಾಟಕದಾದ್ಯಂತ ಹವಾಮಾನ ಇಲಾಖೆ (IMD)ಯಡಿ ಹಸ್ತಚಾಲಿತ ಮಳೆ ಮಾಪಕಗಳನ್ನು ನಿರ್ವಹಿಸುವ 200 ಕ್ಕೂ ಹೆಚ್ಚು ಹೊರಗುತ್ತಿಗೆ ಹವಾಮಾನ ವೀಕ್ಷಕರಿಗೆ ಒಂದು ವರ್ಷದಿಂದ ಗೌರವಧನ ದೊರೆತಿಲ್ಲ, ಕೆಲವರು 2023 ರಿಂದ ಸರ್ಕಾರದಿಂದ ಗೌರವಧನ ಪಾವತಿಗೆ ಕಾಯುತ್ತಿದ್ದಾರೆ. ವೇತನ ವಿಳಂಬದಿಂದಾಗಿ ಪಶ್ಚಿಮ ಘಟ್ಟಗಳ ಪ್ರಮುಖ ಸ್ಥಳಗಳ ದೈನಂದಿನ ಮಳೆ ವರದಿ ಸರಿಯಾಗಿ ಬರುತ್ತಿಲ್ಲ. ಹವಾಮಾನ ಇಲಾಖೆಯ ಸಾರ್ವಜನಿಕ ಮಳೆಯ ಅಂಕಿಅಂಶದಲ್ಲಿ ಭಾರೀ ಅಂತರ ಕಂಡುಬರುತ್ತಿದೆ.
ಮಳೆ ಅಂಕಿಅಂಶಗಳು ವಿಳಂಬವಾದರೆ ಸಮಸ್ಯೆ
ವಿಶೇಷವಾಗಿ ಪಶ್ಚಿಮ ಘಟ್ಟಗಳಂತಹ ದೂರದ, ಹೆಚ್ಚಿನ ಮಳೆ ಬೀಳುವ ಪ್ರದೇಶಗಳಲ್ಲಿ ಮಳೆ ಮೇಲ್ವಿಚಾರಣಾ ವ್ಯವಸ್ಥೆಯಲ್ಲಿ ಹಸ್ತಚಾಲಿತ ಹವಾಮಾನ ವೀಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಈ ವೀಕ್ಷಕರು ಮಳೆಯ ಅಂಕಿಅಂಶ ಸಂಗ್ರಹಿಸಲು ಪ್ರತಿದಿನ ಪ್ರಯಾಣಿಸುತ್ತಿರುತ್ತಾರೆ. ಕಷ್ಟಕರ ಪರಿಸ್ಥಿತಿಗಳಲ್ಲಿ, ನೈಜ-ಸಮಯದ ಹವಾಮಾನ ಮುನ್ಸೂಚನೆ, ಪ್ರವಾಹ ಮತ್ತು ಭೂಕುಸಿತ ಎಚ್ಚರಿಕೆಗಳು ಮತ್ತು ದೀರ್ಘಾವಧಿಯ ಹವಾಮಾನ ದಾಖಲೆಗಳಿಗೆ ಅವರ ವರದಿಗಳು ನಿರ್ಣಾಯಕವಾಗಿವೆ.
ಅವರ ಅಂಕಿಅಂಶ ಸಿಗುವುದು ವಿಳಂಬವಾದಾಗ ಅಥವಾ ಇಲ್ಲದಿದ್ದಾಗ, ಅದು ವ್ಯಾಪಕ ಪರಿಣಾಮಗಳನ್ನು ಬೀರುತ್ತದೆ. ತುರ್ತು ಪ್ರತಿಕ್ರಿಯೆ, ಮೂಲಸೌಕರ್ಯ ಯೋಜನೆ ಮತ್ತು ಹವಾಮಾನ ಮಾದರಿ ಎಲ್ಲವೂ ಸ್ಥಿರ ಮತ್ತು ನಿಖರವಾದ ಮಳೆ ದಾಖಲೆಗಳನ್ನು ಅವಲಂಬಿಸಿರುತ್ತದೆ. ಒಂದು ದಿನದ ಅಂತರವು ಸಹ ಹವಾಮಾನ ದತ್ತಾಂಶದ ವಿಶ್ವಾಸಾರ್ಹತೆಯಲ್ಲಿ ಕೊರತೆಯನ್ನುಂಟುಮಾಡುತ್ತದೆ, ಈ ವೀಕ್ಷಕರಿಗೆ ಸಕಾಲಿಕ ಪರಿಹಾರ ಮತ್ತು ಬೆಂಬಲದ ಮಹತ್ವ ನೀಡಬೇಕಾಗುತ್ತದೆ.
ಕೊಡಗಿನ ಭಾಗಮಂಡಲದ ಹವಾಮಾನ ವೀಕ್ಷಕರಾದ 51 ವರ್ಷದ ಬಿ ಹೊನ್ನಪ್ಪ 28 ವರ್ಷಗಳಿಂದ ಮಳೆಯ ದತ್ತಾಂಶ ಸಂಗ್ರಹಿಸುತ್ತಿದ್ದಾರೆ, ನಮಗೆ ದಿನಕ್ಕೆ ನೀಡುವ ಗೌರವಧನವು 30 ರಿಂದ 40 ರೂ.ಗಳಾಗಿದ್ದು, ತಿಂಗಳಿಗೆ ಸುಮಾರು 10,000 ರೂಪಾಯಿಗಳಷ್ಟಾಗುತ್ತದೆ. ಇದನ್ನು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ನೀಡಲಾಗುತ್ತದೆ, ಆದರೆ ಕಳೆದ ಎರಡು ವರ್ಷಗಳಿಂದ ನನಗೆ ಹಣವೇ ಬಂದಿಲ್ಲ ಎನ್ನುತ್ತಾರೆ.
ವಾರ್ಷಿಕ ಮಳೆ 6,000 ರಿಂದ 7,000 ಮಿ.ಮೀ.ವರೆಗೆ ಇರುವ ಉತ್ತರ ಕನ್ನಡದ ಕ್ಯಾಸಲ್ ರಾಕ್ ಗ್ರಾಮದ 48 ವರ್ಷದ ಸಂತೋಷ್, ನನಗೆ 4,000 ರೂಪಾಯಿ ಸಿಕ್ಕಿದೆ, ಅದು ಕೂಡ ಆರು ತಿಂಗಳ ಹಿಂದೆ. ಕಳೆದ ಎರಡು ವರ್ಷಗಳಲ್ಲಿ ನನಗೆ ಅಷ್ಟೇ ಬಂದಿದೆ ಎನ್ನುತ್ತಾರೆ.
TNIE ಪ್ರತಿನಿಧಿ ಈ ಬಗ್ಗೆ ಸಂಪರ್ಕಿಸಿದಾಗ, ಬೆಂಗಳೂರಿನ ಐಎಂಡಿ ನಿರ್ದೇಶಕ ಎನ್ ಪುವಿಯರಸನ್, ನಾವು ಜೂನ್ 2024 ರವರೆಗಿನ ಬಾಕಿಗಳನ್ನು ಪಾವತಿಸಿದ್ದೇವೆ. ಬಾಕಿ ಇರುವ ಮೊತ್ತವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಇ-ಆಫೀಸ್ ಅನುಷ್ಠಾನದಿಂದಾಗಿ ವಿಳಂಬವಾಗಿದೆ. ಅವುಗಳನ್ನು ಆದಷ್ಟು ಬೇಗ ಪರಿಹರಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.