ಬೆಂಗಳೂರಿನಲ್ಲಿ ಇಂದು ಮಳೆಯ ಆರ್ಭಟದ ನಡುವೆ ಮೆಟ್ರೊ ರೈಲು ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಬಂದಿದ್ದು, ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು.
ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ನೀಡಿದ್ದಾರೆ. ನಂತರ ಎಲೆಕ್ಟ್ರಾನಿಕ್ ಸಿಟಿ ವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿದರು. ಈ ವೇಳೆ ಕೆಲ ನಿಮಿಷ ಶಾಲಾ ಮಕ್ಕಳೊಂದಿಗೆ ಮಾತುಕತೆ ನಡೆಸಿದರು.
ಬಳಿಕ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅಕ್ಕಪಕ್ಕ ಕುಳಿತುಕೊಂಡು ಮೆಟ್ರೋನಲ್ಲಿ ಪ್ರಯಾಣ ಮಾಡಿದರು. ಪ್ರಯಾಣದುದ್ದಕ್ಕೂ ಮಾತನಾಡುತ್ತಾ ನಗುತ್ತಾ ಸಾಗಿದ್ದು ವಿಶೇಷವಾಗಿತ್ತು. ಈ ಫೋಟೋ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಇತರರು ಮೋದಿ-ಸಿಎಂ ಎದುರುಗಡೆಯ ಆಸನದಲ್ಲಿ ಕುಳಿತು ಪ್ರಯಾಣಿಸಿದರು. ಈ ಸಂದರ್ಭದಲ್ಲಿ ಮೋದಿ ಮಾತಿಗೆ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್ ಬಿದ್ದು ಬಿದ್ದು ನಕ್ಕಿದ್ದಾರೆ.
ಮೋದಿ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಗುವುದನ್ನು ಬಿಜೆಪಿ ಇತರೆ ನಾಯಕರು ನೋಡುತ್ತ ಕುಳಿತಿದ್ದರು. ನಂತರ ಪ್ರಯಾಣದುದ್ದಕ್ಕೂ ಆ ಕಡೆ ಈ ಕಡೆ ಕೈ ಸನ್ನೆ ಮಾಡುತ್ತಾ ಉಭಯ ನಾಯಕರು ಮಾತುಕತೆ ನಡೆಸುತ್ತಾ ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣಕ್ಕೆ ಬಂದಿಳಿದರು.