ಬೆಂಗಳೂರು: ದಕ್ಷಿಣ ಬೆಂಗಳೂರಿನ ಆರ್ ವಿ ರಸ್ತೆಯಿಂದ ಪಶ್ಚಿಮದ ಬೊಮ್ಮಸಂದ್ರ ಸಂಪರ್ಕಿಸುವ ಬಹುನಿರೀಕ್ಷಿತ ನಮ್ಮ ಮೆಟ್ರೋ 'ಹಳದಿ ಮಾರ್ಗ' ಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹಸಿರು ನಿಶಾನೆ ತೋರಿದ್ದಾರೆ.
16 ಎತ್ತರಿಸಿದ ನಿಲ್ದಾಣ (elevated stations) ಹೊಂದಿರುವ ಸುಮಾರು 19.15 ಕಿ.ಮೀ ಉದ್ದದ ಕಾರಿಡಾರ್ ನ್ನು ರೂ. 7, 160 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಪ್ರತಿದಿನ 8 ಲಕ್ಷ ಪ್ರಯಾಣಿಕರು ಸಂಚರಿಸುವ ಸಾಧ್ಯತೆಯಿದೆ.
ಹೊಸ ಮಾರ್ಗವು ನಗರದ ಪ್ರಮುಖ ಜನ ವಸತಿ ಪ್ರದೇಶಗಳಾದ ಸಿಲ್ಕ್ ಬೋರ್ಡ್ ಜಂಕ್ಷನ್, ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್ ಸಿಟಿ ಮತ್ತು ಬೊಮ್ಮಸಂದ್ರ ಇಂಡಸ್ಟ್ರಿಯಲ್ ಏರಿಯ ಹಾಗೂ ಇನ್ಫೋಸಿಸ್, ಬಯೋಕಾನ್ ಮತ್ತು ಟಿಸಿಎಸ್‌ನಂತಹ ಪ್ರಮುಖ ಐಟಿ ಕಂಪನಿಗಳನ್ನು ಹೊಂದಿರುವ ಪ್ರದೇಶಗಳಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ.
ಟೆಕ್ ಪಾರ್ಕ್‌ಗಳು- ಉತ್ಪಾದನಾ ವಲಯಗಳೊಂದಿಗೆ (manufacturing zones)ವಸತಿ ಪ್ರದೇಶಗಳನ್ನು ನೇರವಾಗಿ ಸಂಪರ್ಕಿಸುವ ಮೂಲಕ ವಿಶೇಷವಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ ನಂತಹ ಪ್ರದೇಶಗಳಲ್ಲಿ ಕುಖ್ಯಾತ ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.ಸಮಯವೂ ಉಳಿತಾಯವಾಗಲಿದೆ.
ನಾಳೆಯಿಂದ ಸೇವೆ ಆರಂಭ: ಅಧಿಕಾರಿಗಳು ಈ ಮಾರ್ಗಕ್ಕೆ "ಗೇಮ್ ಚೇಂಜರ್" ಎಂದು ಕರೆಯುತ್ತಾರೆ. ಮೆಟ್ರೋ ಸಮಯ ಮತ್ತು ಕಾರ್ಯಾಚರಣೆಗಳು ವಾಣಿಜ್ಯ ಸೇವೆಗಳು ಸೋಮವಾರ ಪ್ರಾರಂಭವಾಗುತ್ತವೆ. ಆರಂಭದಲ್ಲಿ ಮೂರು ಚಾಲಕರಹಿತ ರೈಲುಗಳು ಪ್ರತಿ 25 ನಿಮಿಷಗಳವರೆಗೆ ಬೆಳಿಗ್ಗೆ 5:00 ರಿಂದ ರಾತ್ರಿ 11:00 ರವರೆಗೆ ಕಾರ್ಯನಿರ್ವಹಿಸುತ್ತವೆ, ಈ ತಿಂಗಳ ಕೊನೆಯಲ್ಲಿ ಹೆಚ್ಚಿನ ರೈಲುಗಳು ಸೇರುವುದರಿಂದ ಪ್ರತಿ 20 ನಿಮಿಷಗಳಿಗೆ ಒಂದು ರೈಲು ಸಂಚರಿಸುತ್ತದೆ.
ಮೆಟ್ರೊ ದರ: ಒಂದು ಕಡೆಯ ದರ ರೂ. 10 ರಿಂದ 90 ರವರೆಗೆ ಇರುತ್ತದೆ. ಇದು ಸದ್ಯ ಇರುವ ನಮ್ಮ ಮೆಟ್ರೋ ದರಕ್ಕೆ ಅನುಗುಣವಾಗಿರುತ್ತದೆ. ಉದಾಹರಣೆಗೆ RV ರಸ್ತೆಯಿಂದ ಜಯದೇವಕ್ಕೆ ಪ್ರಯಾಣಿಸಲು ರೂ. 10 ವೆಚ್ಚವಾಗುತ್ತದೆ, ಆದರೆ ಉದ್ದವಾದ ವೈಟ್‌ಫೀಲ್ಡ್ ನಿಂದ (ನೇರಳ ಮಾರ್ಗ) ಬೊಮ್ಮಸಂದ್ರಕ್ಕೆ (ಹಳದಿ ಲೈನ್) ರೂ. 90 ಆಗಲಿದೆ.
ಹಳದಿ ಮಾರ್ಗದ ನಿಲ್ದಾಣಗಳ ಪಟ್ಟಿ ( Yellow Line Stations)
ಆರ್‌ವಿ ರಸ್ತೆ - ಹಸಿರು ಮಾರ್ಗದೊಂದಿಗೆ ಪರಿವರ್ತಿತ ಸ್ಥಳ (RV Road - interchange with Green Line)
ರಾಗಿಗುಡ್ಡ
ಜಯದೇವ ಆಸ್ಪತ್ರೆ - ಭವಿಷ್ಯದಲ್ಲಿ ನೇರಳೆ ಮಾರ್ಗಕ್ಕೆ ಬದಲಾಯಿಸುವ ಸ್ಥಳ( future interchange with Pink Line)
BTM ಲೇಔಟ್
ಕೇಂದ್ರ ರೇಷ್ಮೆ ಮಂಡಳಿ
HSR ಲೇಔಟ್
ಆಕ್ಸ್‌ಫರ್ಡ್ ಕಾಲೇಜು
ಹೊಂಗಸಂದ್ರ
ಕೂಡ್ಲು ಗೇಟ್
ಸಿಂಗಸಂದ್ರ
ಹೊಸ ರಸ್ತೆ
ಎಲೆಕ್ಟ್ರಾನಿಕ್ ಸಿಟಿ-I
ಕೋನಪ್ಪನ ಅಗ್ರಹಾರ
ಹುಸ್ಕೂರು ರಸ್ತೆ
ಹೆಬ್ಬಗೋಡಿ
ಬೊಮ್ಮಸಂದ್ರ
ಅಗಾದ ಪ್ರಮಾಣದಲ್ಲಿ ಸಮಯದ ಉಳಿತಾಯ: ಹಳದಿ ಮಾರ್ಗದಿಂದ ಎಲೆಕ್ಟ್ರಾನಿಕ್ ಸಿಟಿಗೆ ಪಿಕ್ ಅವರ್ ನಲ್ಲಿ ಆಗುತ್ತಿದ್ದ ಭಾರಿ ಸಂಚಾರ ದಟ್ಟಣೆ ತಗ್ಗಲಿದೆ. ರಸ್ತೆಯ ಮೂಲಕ ತೆರಳುತ್ತಿದ್ದ ಪ್ರಯಾಣಿಕರು ಕೆಲವೊಮ್ಮೆ 1.5-2 ಗಂಟೆಗಳ ಕಾಲ ಟ್ರಾಫಿಕ್ ನಲ್ಲಿ ಸಿಲುಕಿ ಹೈರಾಣಾಗುತ್ತಿದ್ದರು. ಇದೀಗ ನೂತನ ಮಾರ್ಗದಿಂದ ಕೇವಲ ಅರ್ಧ ಗಂಟೆ ಅಥವಾ 45 ನಿಮಿಷಗಳಲ್ಲಿಯೇ ಸುಲಭವಾಗಿ ಪ್ರಯಾಣಿಸಬಹುದಾಗಿದೆ.