ಬೆಂಗಳೂರು: ನಮ್ಮ ಮೆಟ್ರೋ ಗುಲಾಬಿ ಮಾರ್ಗ ವಿಳಂಬವಾಗುತ್ತಿರುವುದು ಹಾಗೂ ವೆಚ್ಚಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ವಿರುದ್ಧ ಸಂಸದ ತೇಜಸ್ವಿ ಸೂರ್ಯ ಅವರು ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಹಳದಿ ಮಾರ್ಗ ಉದ್ಘಾಟನೆಗೊಂಡಿದ್ದು, ಸೋಮವಾರದಿಂದ ರೈಲುಗಳ ಸಂಚಾರ ಆರಂಭವಾಗಿದೆ. ಈ ಸಂದರ್ಭದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ತೇಜಸ್ವಿ ಸೂರ್ಯ ಅವರು ಮಾತನಾಡಿದ್ದು, ಈ ವೇಳೆ ಬಿಎಂಆರ್‌ಸಿಎಲ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಮಾರ್ಗವು ಸೆಪ್ಟೆಂಬರ್ 2025 ರಲ್ಲಿ ಉದ್ಘಾಟನೆಗೊಳ್ಳಬೇಕಿತ್ತು, ಇದೀಗ 2026ರ ಮಾರ್ಚ್ ವೇಳೆಗೆ ಸಿದ್ಧವಾಗಲಿದೆ ಎಂದು ಹೇಳುತ್ತಿದ್ದಾರೆ. ಡೈರಿ ಸರ್ಕಲ್‌ನಿಂದ ನಾಗವಾರವರೆಗಿನ ಭೂಗತ ವಿಭಾಗವನ್ನು ಜೂನ್ 2026 ರಂದು ತೆರೆಯಲು ಉದ್ದೇಶಿಸಲಾಗಿತ್ತು, ಈಗ ಸೆಪ್ಟೆಂಬರ್ 2026 ಕ್ಕೆ ನಿಗದಿಪಡಿಸಲಾಗಿದೆ. ಬಿಎಂಆರ್‌ಸಿಎಲ್ ಪದೇ ಪದೇ ವಿಳಂಬ ಮಾಡುತ್ತಿದ್ದು, ಇದರಿಂದ ವೆಚ್ಚಗಳೂ ಹೆಚ್ಚಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಗೆ ಆರಂಭದಲ್ಲಿ 6,300 ಕೋಟಿ ರೂಪಾಯಿಗಳಿಂದ 14,000 ಕೋಟಿ ರೂಪಾಯಿ ಎಂದು ಅಂದಾಯಿಸಲಾಗಿತ್ತು. ವಿಳಂಬದಿಂದಾಗಿ ಇದೀಗ 26,000 ಕೋಟಿ ರೂಪಾಯಿಗಳಿಂದ 40,000 ಕೋಟಿ ರೂಗೆ ಹೆಚ್ಚಳವಾಗಿದೆ. ಇದು ತೆರಿಗೆದಾರರ ಮೇಲೆ ಅನಗತ್ಯ ಹೊರೆ ಹಾಕಿದಂತಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಮೆಟ್ರೋ ರೈಲು ಆವರ್ತನವನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದ ಸಂಸದರು, ಹಳದಿ ಮಾರ್ಗದಲ್ಲಿ, ವರ್ಷಾಂತ್ಯದ ವೇಳೆಗೆ ಹೆಚ್ಚಿನ ರೈಲು ಸಂಚರಿಸುವ ನಿರೀಕ್ಷೆಗಳಿವೆ ಎಂದು ಹೇಳಿದರು.
ಈಗಾಗಲೇ ಟಿಟಾಘರ್ ರೈಲ್ ಸಿಸ್ಟಮ್ಸ್ (ರೈಲುಗಳನ್ನು ತಯಾರಿಸುವ ಮತ್ತು ಪೂರೈಸುವ ಕಂಪನಿ) ನ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತುಕತೆ ನಡೆಸಲಾಗಿದ್ದು. ಅಕ್ಟೋಬರ್‌ನಿಂದ ಎರಡು ರೈಲುಗಳು ಪೂರೈಕೆ ಮಾಡುವುದಾಗಿ ಮತ್ತು ಆಗಸ್ಟ್ ಅಂತ್ಯದ ವೇಳೆಗೆ ನಾಲ್ಕನೇ ರೈಲು ಸೇರ್ಪಡೆಗೊಳ್ಳಲಿದೆ ಎಂದು ಹೇಳಿದ್ದಾರೆಂದು ಮಾಹಿತಿ ನೀಡಿದರು.