ತುಮಕೂರು: ಕೆಎನ್ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿರುವುದನ್ನು ವಿರೋಧಿಸಿ ಅವರ ಬೆಂಬಲಿಗರು ಮಂಗಳವಾರ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೌನ್ಸಿಲರ್ ಗಿರಿಜಾ ಮಂಜುನಾಥ್ ಮಧುಗಿರಿ ಪುರಸಭೆಗೆ ರಾಜೀನಾಮೆ ನೀಡಿದ್ದು, ಇತರರು ರಾಜಣ್ಣ ಅವರಿಗೆ ಮಾಡಿದ ಅವಮಾನವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ರಾಜಣ್ಣ ಅವರ ಅಭಿಮಾನಿ ಶಿವಲಿಂಗ ಎಂಬುವವರು ಪೆಟ್ರೋಲ್ ಸುರಿದುಕೊಂಡಿದ್ದು, ಸ್ಥಳದಲ್ಲಿದ್ದವರು ಅವರನ್ನು ತಡೆದು ಸಮಾಧಾನಪಡಿಸಿದ್ದಾರೆ.
ರಾಜಣ್ಣ ಅವರ ಬೆಂಬಲಿಗರು ತಮ್ಮ ನಾಯಕನ ಪರವಾಗಿ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳನ್ನು ಹಿಡಿದು ಮೆರವಣಿಗೆ ನಡೆಸಿದರು ಮತ್ತು ಧ್ವನಿವರ್ಧಕಗಳಲ್ಲಿ ಘೋಷಣೆಗಳನ್ನು ಕೂಗಿದರು. ಸರಿಯಾದ ಕಾರಣಗಳಿಲ್ಲದೆ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿದ್ದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಮತ್ತೆ ಅವರನ್ನು ಸಂಪಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಮಂಗಳವಾರ ಮಧ್ಯಾಹ್ನ ಬಂದ್‌ಗೆ ಕರೆ ನೀಡಿದ್ದ ಅವರು, ಅಂಗಡಿ ಮಾಲೀಕರನ್ನು ದಿನದ ಮಟ್ಟಿಗೆ ಅಂಗಡಿಗಳನ್ನು ಮುಚ್ಚುವಂತೆ ಒತ್ತಾಯಿಸಿದರು. ಪೊಲೀಸರು ಗುಂಪನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ, ಉದ್ರಿಕ್ತರು ಅಂಗಡಿಗಳ ಬಾಗಿಲು ಮುಚ್ಚುವಂತೆ ಒತ್ತಾಯಿಸಿದರು.
ಪೊಲೀಸರು ಬೃಹತ್ ಜನಸಮೂಹದ ಮುಂದೆ ಅಸಹಾಯಕರಾಗಿ ನಿಂತು ಅವರ ದೌರ್ಜನ್ಯವನ್ನು ನೋಡುತ್ತಿದ್ದರು. ಈ ವೇಳೆ ಕೆಲವು ಅಂಗಡಿಗಳಿಗೂ ಹಾನಿಯಾಯಿತು ಮತ್ತು ಅವುಗಳ ಮಾಲೀಕರು ಮತ್ತು ಸಿಬ್ಬಂದಿಯನ್ನು ಉದ್ರಿಕ್ತ ಗುಂಪು ಹಲ್ಲೆ ನಡೆಸಿತು ಎಂದು ಮೂಲಗಳು ತಿಳಿಸಿವೆ.
2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ನಡೆದ ಮತ ಕಳ್ಳತನಕ್ಕೆ ರಾಜ್ಯ ಸರ್ಕಾರವನ್ನು ದೂಷಿಸಿದ್ದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದ ಮೇರೆಗೆ ರಾಜಣ್ಣ ಅವರನ್ನು ಸಂಪುಟದಿಂದ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.