ಬೆಂಗಳೂರು: ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ ನಂಬರ್ 1ರಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ದಲಿತರನ್ನಷ್ಟೇ ಹೊರಹಾಕಿದ್ದಾರೆಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಂಗಳವಾರ ಆರೋಪಿಸಿದ್ದಾರೆ.
ಪರಿಷತ್ತಿನಲ್ಲಿ ಈ ವಿಚಾರ ಪ್ರಸ್ತಾಪಿಸಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ (1901) ಕಾಡುಗೋಡಿಯ 711 ಎಕರೆಯನ್ನು ಮೀಸಲು ಅರಣ್ಯ ಪ್ರದೇಶ ಎಂದು ಘೋಷಿಸಲಾಗಿತ್ತು. 6-7 ದಶಕಗಳ ಹಿಂದೆಯೇ ಇಲ್ಲಿ ಹಲವರಿಗೆ ಜಮೀನು ಮಂಜೂರು ಮಾಡಲಾಗಿತ್ತು. ರೈತರಿಗೆ ಪರಿಹಾರ ನೀಡಿ 153 ಎಕರೆಯನ್ನು ಭೂಸ್ವಾಧೀನಪಡಿಸಿಕೊಂಡಿದ್ದ ಕೆಐಎಡಿಬಿ, ಕೈಗಾರಿಕೆಗಳಿಗೆ ನೀಡಿದೆ. ರೈಲ್ವೆ ಯೋಜನೆಗೆ 228 ಎಕರೆ ನೀಡಲಾಗಿದೆ. ರಿಯಲ್ ಎಸ್ಟೇಟ್‌ಗೆ, ಬೆಂಗಳೂರು ಜಲ ಮಂಡಳಿಗೆ, ಮೆಟ್ರೊ ರೈಲು ಯೋಜನೆಗೂ ಜಮೀನು ನೀಡಲಾಗಿದೆ.
ವ್ಯವಸಾಯ ಸೇವಾ ಸಹಕಾರ ಸಂಘ, ಗೃಹ ನಿರ್ಮಾಣ ಸಂಘಗಳ ಮೂಲಕ ಸಾವಿರಾರು ಜನರು ಮನೆಗಳನ್ನು ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ 2016ರ ನಂತರದ ನಿಯಮಗಳನ್ನು ಬಳಸಿಕೊಂಡು ಬಡವರನ್ನು ತೆರವುಗೊಳಿಸಿದ್ದಾರೆ. ಆದರೆ, ದೊಡ್ಡ ಬಿಲ್ಟರ್ ಗಳ ಕಚೇರಿಗಳು, ಕೈಗಾರಿಕೆಗಳು ಹಾಗೂ ಇತರೆ ನಿರ್ಮಾಣಗಳನ್ನು ಮುಟ್ಟಿಲ್ಲ ಎಂದು ಕಿಡಿಕಾರಿದರು.
ಇದಕ್ಕೆ ಉತ್ತರಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಅರಣ್ಯ ಕಾನೂನು, ಕೋರ್ಟ್ ಆದೇಶಗಳ ಪ್ರಕಾರವೇ ಕಾಡುಗೋಡಿಯಲ್ಲಿ ಒತ್ತುವರಿಯಾಗಿದ್ದ 120 ಎಕರೆ ಅರಣ್ಯ ಭೂಮಿಯನ್ನು ಮರುವಶಪಸಿಕೊಳ್ಳಲಾಗಿದೆ. ಯಾವುದೇ ಕಟ್ಟಡ, ವಾಸಸ್ಥಳ ತೆರವು ಮಾಡಿಲ್ಲ. ಒಂದು ಬಾರಿ ಅರಣ್ಯ ಎಂದು ಅಧಿಸೂಚನೆಯಾದ ಪ್ರದೇಶ ಎಂದಿಗೂ ಅರಣ್ಯ ಭೂಮಿ. ಒತ್ತುವರಿ ತೆರವು ಮಾಡಿ, ಗಡಿ ಗುರುತಿಸಲಾಗಿದೆ. ತಾತ್ಕಾಲಿಕ ತಡೆ ಗೋಡೆ ನಿರ್ಮಿಸಿ, ಸ್ಥಳೀಯ ಪ್ರಭೇದದ ಸಸಿಗಳನ್ನು ನೆಡಲಾಗಿದೆ ಎಂದು ಹೇಳಿದರು.
ಸರ್ಕಾರದ ಅಂಗ ಸಂಸ್ಥೆಗಳಿಗೆ ನೀಡಿದ ಭೂಮಿಗೆ ಪರ್ಯಾಯ ಭೂಮಿ ಪಡೆಯಲಾಗುತ್ತದೆ. 1985ರಲ್ಲಿ ಕೆಐಎಡಿಬಿ ಭೂಸ್ವಾಧೀನ ಪಡಿಸಿಕೊಂಡಾಗ ಅರಣ್ಯ ಇಲಾಖೆ ಗಮನಹರಿಸಿರಲಿಲ್ಲ. ನಂತರ ಈ ವಿಚಾರ ಕೋರ್ಟ್‌ನಲ್ಲಿದೆ. ಮೆಟ್ರೊ ರೈಲು ಯೋಜನೆಗೆ 45 ಎಕರೆಯನ್ನು 30 ವರ್ಷಗಳಿಗೆ ಗುತ್ತಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಬಳಿಕ ಪ್ರಕರಣ ಕುರಿತು ಸದನ ಸಮಿತಿ ರಚಿಸಬೇಕು’ ಎಂದು ಬಿಜೆಪಿಯ ಸಿ.ಟಿ. ರವಿ, ಕೇಶವ ಪ್ರಸಾದ್ ಸೇರಿದಂತೆ ಹಲವರು ಪಟ್ಟುಹಿಡಿದರು.
ಈ ವೇಳೆ ಮಾತನಾಡಿದ ಸಚಿವರು, ‘ತಮ್ಮ ಬಳಿ ಇರುವ ಎಲ್ಲ ದಾಖಲೆ ಕೊಡಿ. ಕಾನೂನು ಇಲಾಖೆ, ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆದ ನಂತರ ಮತ್ತೆ ಚರ್ಚೆ ನಡೆಸಲಾಗುವುದು’ ಎಂದು ಚರ್ಚೆಗೆ ತೆರೆ ಎಳೆದರು.