ಕೋಲಾರ: ಕೋಲಾರ ತಾಲೂಕಿನ ಬಸವನತ್ತದ ಬಳಿಯಿರುವ ವಿದ್ಯಾಜ್ಯೋತಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಆಹಾರ ಸೇವಿಸಿದ ಬಳಿಕ 50 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಬುಧವಾರ ನಡೆದಿದೆ.
ಹಾಸ್ಟೆಲ್‌ನಲ್ಲಿ ರಾತ್ರಿ ಊಟ ಸೇವಿಸಿದ ಬಳಿಕ ವಿದ್ಯಾರ್ಥಿಗಳಲ್ಲಿ ವಾಂತಿ, ಅತಿಸಾರ ಸಮಸ್ಯೆ ಶುರುವಾಗಿದ್ದು, ಕೂಡಲೇ ಎಲ್ಲರನ್ನೂ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯಲ್ಲಿ 45 ವಿದ್ಯಾರ್ಥಿಗಳು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ಐವರನ್ನು ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಕೋಲಾರದ ಎಡಿಸಿ ಮಂಗಳಾ ಅವರು ಮಾತನಾಡಿ, ಹಾಸ್ಟೆಲ್ ನಲ್ಲಿ ಊಟ ಮಾಡಿದ ಕೆಲವು ಗಂಟೆಗಳ ನಂತರ ವಿದ್ಯಾರ್ಥಿಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ತಹಶೀಲ್ದಾರ್ ಜೊತೆಗೆ ಆಸ್ಪತ್ರೆಗೆ ಭೇಟಿ ನೀಡಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಜಗದೀಶ್ ಅವರ ಸಮ್ಮುಖದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಲಾಗಿದೆ.
ಭೋಜನಕ್ಕೆ ದೋಸೆ, ಚಟ್ನಿ ಮತ್ತು ಆಲೂಗಡ್ಡೆ ಫ್ರೈ ಸೇವಿಸಿರುವುದಾಗಿ ವಿದ್ಯಾರ್ಥಇಗಳು ತಿಳಿಸಿದ್ದಾರೆ. ತಹಶೀಲ್ದಾರ್ ಅವರ ನೇರ ಮೇಲ್ವಿಚಾರಣೆಯಲ್ಲಿ ಆಹಾರ ಸುರಕ್ಷತೆಯ ಬಗ್ಗೆ ವಿವರವಾದ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ತಂಡ ಆಹಾರ ಮಾದರಿಯನ್ನು ಸಂಗ್ರಹಿಸಿದೆ. ಆಸ್ಪತ್ರೆಗೆ ದಾಖಲಾಗಿರುವ ಎಲ್ಲಾ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ. ಅಸ್ವಸ್ಥತೆ, ಹೊಟ್ಟೆ ನೋವು ಮತ್ತು ಆಯಾಸದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ. ಜಗದೀಶ್ ಅವರು ಹೇಳಿದ್ದಾರೆ.