ಮಾಣೆಕ್ ಷಾ ಮೈದಾನದಲ್ಲಿ ಸಿದ್ಧತೆ ಪರಿಶೀಲಿಸಿದ ಅಧಿಕಾರಿಗಳು. 
ರಾಜ್ಯ

79ನೇ ಸ್ವಾತಂತ್ರ್ಯ ದಿನಾಚರಣೆಗೆ ಮಾಣೆಕ್ ಷಾ ಮೈದಾನ ಸಜ್ಜು: ಎಲ್ಲೆಡೆ ಬಿಗಿ ಭದ್ರತೆ; ಸಂಚಾರ ಬದಲಾವಣೆ, ಹಲವೆಡೆ ಪಾರ್ಕಿಂಗ್ ನಿಷೇಧ

ಸ್ವಾತಂತ್ರ್ಯ ದಿನಾಚರಣೆಗೆ ಮಾಣೆಕ್ ಷಾ ಪರೇಡ್ ಮೈದಾನ ಸಂಪೂರ್ಣ ಸಜ್ಜಾಗಿದ್ದು ಆ.15ರ ಬೆಳಗ್ಗೆ 8.58ಕ್ಕೆ ಮುಖ್ಯಮಂತ್ರಿ ಮೈದಾನಕ್ಕೆ ಆಗಮಿಸಲಿದ್ದು, ಬೆಳಿಗ್ಗೆ 9ಕ್ಕೆ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 79ನೇ ಸ್ವಾತಂತ್ರ್ಯದಿನಾಚರಣೆ ಅದ್ಧೂರಿ ಆಚರಣೆಗಾಗಿ ಮಾಣೆಕ್ಷಾ ಪರೇಡ್ ಮೈದಾನವು ಸಂಪೂರ್ಣವಾಗಿ ಸಿದ್ಧಗೊಂಡಿದೆ, 8,000 ಜನರಿಗೆ ಆಸನ ವ್ಯವಸ್ಥೆ, ಭದ್ರತಾ ಪಾರ್ಕಿಂಗ್ ಸೇರಿದಂತೆ ಹಲವು ವ್ಯವಸ್ಥೆ ಮಾಡಲಾಗಿದೆ.

ದೇಶ ಭಕ್ತಿಯ ಪ್ರತೀಕವಾಗಿರುವ ಈ ಸಮಾರಂಭಕ್ಕೆ ಯಾವೆಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂಬುದನ್ನು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮತ್ತು ಪೊಲೀಸ್‌ ಆಯುಕ್ತ ಸೀಮಂತ್ ಕುಮಾರ್‌ಸಿಂಗ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸ್ವಾತಂತ್ರ್ಯ ದಿನಾಚರಣೆಗೆ ಮಾಣೆಕ್ ಷಾ ಪರೇಡ್ ಮೈದಾನ ಸಂಪೂರ್ಣ ಸಜ್ಜಾಗಿದ್ದು ಆ.15ರ ಬೆಳಗ್ಗೆ 8.58ಕ್ಕೆ ಮುಖ್ಯಮಂತ್ರಿ ಮೈದಾನಕ್ಕೆ ಆಗಮಿಸಲಿದ್ದು, ಬೆಳಿಗ್ಗೆ 9ಕ್ಕೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ತೆರೆದ ಜೀಪಿನಲ್ಲಿ ಪರೇಡ್ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸಿ ನಾಡಿನ ಜನತೆಗೆ 79ನೇ ಸ್ವಾತಂತ್ರೋತ್ಸವದ ಸಂದೇಶ ನೀಡಲಿದ್ದಾರೆ.

ಸಮಾರಂಭದಲ್ಲಿ ಕೆಎಸ್‌ಆರ್‌ಪಿ, ಸಿಆರ್‌ಪಿಎಫ್, ಬಿಎಸ್ ಎಫ್, ಗೋವಾ ಪೊಲೀಸ್ ತಂಡ ಸೇರಿ ವಿವಿಧ ಇಲಾಖೆಯ 35 ತುಕಡಿಗಳಲ್ಲಿ 1,150 ಮಂದಿ ಪಥ ಸಂಚಲನ ನಡೆಸಲಿದ್ದಾರೆ. ನಗರದ ಸರ್ಕಾರಿ ಮತ್ತು ಬಿಬಿಎಂಪಿಯ 1,150 ವಿದ್ಯಾರ್ಥಿಗಳು ಹಾಗೂ ಕರ್ನಾಟಕ ಪೊಲೀಸ್ ಸಮೂಹ ವಾದ್ಯಮೇಳದ 253 ಅಧಿಕಾರಿ, ಸಿಬ್ಬಂದಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಅತಿ ಗಣ್ಯರಿಗೆ ಸೇರಿ ಒಟ್ಟು 8 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಜಿ-2 ಪ್ರವೇಶ ದ್ವಾರದಲ್ಲಿ ಗಣ್ಯ ವ್ಯಕ್ತಿಗಳಿಗೆ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳಿಗಾಗಿ 3 ಸಾವಿರ ಆಸನ ಕಲ್ಪಿಸಲಾಗಿದೆ. ಜಿ-4 ಪ್ರವೇಶ ದ್ವಾರದಲ್ಲಿ ಇತರೆ ಎಲ್ಲಾ ಇಲಾಖೆಯ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಗಳಿಗೆ 2 ಸಾವಿರ ಆಸನ ಮೀಸಲಿಡಲಾಗಿದೆ. ಬರುವವರು ಪ್ರವೇಶ ದ್ವಾರದಲ್ಲಿ ಆಹ್ವಾನ ಪತ್ರಿಕೆಯೊಂದಿಗೆ ಕಡ್ಡಾಯವಾಗಿ ಅರ್ಹ ಗುರುತಿನ ಚೀಟಿಯೊಂದಿಗೆ ಹಾಜರಾಗಬೇಕು ಎಂದು ಮನವಿ ಮಾಡಿದರು.

ಪೊಲೀಸ್‌ ಆಯುಕ್ತ ಸೀಮಂತ್ ಕುಮಾರ್‌ಸಿಂಗ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮೈದಾನದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಂಚಾರ ನಿರ್ವಹಣೆ ಹಾಗೂ ಆಚರಣೆಗೆ ಆಗಮಿಸುವ ಗಣ್ಯರು ಮತ್ತು ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಸಾರಿಗೆ ಬಳಕೆ ಮಾಡಿಕೊಂಡು ಆಗಮಿಸಬೇಕೆಂದು ಮನವಿ ಮಾಡಿದರು.

ಭದ್ರತೆಗಾಗಿ ಡಿಸಿಪಿ, ಎಸಿಪಿ, ಪೊಲೀಸ್ ಅಧಿ ಕಾರಿಗಳು, ಪಿಎಸ್‌ಐ, ಎಎಸ್‌ಐ, ಎಚ್ಚಿ, ಪಿಸಿ, ಮಹಿಳಾ ಪೊಲೀಸರು, ಸಂಚಾರ ವ್ಯವಸ್ಥೆ ನಿಯಂತ್ರಣಕ್ಕೆ ಡಿಸಿಪಿ, ಎಸಿಪಿ, ಪೊಲೀಸ್ ಅಧಿಕಾರಿಗಳು, ಮಹಿಳಾ ಪಿಎಸ್‌ಐ, ಎಎಸ್‌ಐ, ಎಚ್‌, ಪಿಸಿ ಸೇರಿ ಒಟ್ಟು 2 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಮೈದಾನ ಸುತ್ತ ಭದ್ರತೆ ಮತ್ತು ಸುರಕ್ಷತೆಗಾಗಿ ಹೆಚ್ಚುವರಿ 100 ಸಿಸಿ ಕ್ಯಾಮೆರಾ ವ್ಯವಸ್ಥೆ, ಬ್ಯಾಗೇಜ್ ಸ್ಕ್ಯಾನರ್, ಕೆಎಸ್‌ಆರ್‌ಪಿ ಮತ್ತು ಸಿಆರ್‌ತುಕಡಿ, ಎರಡು ಅಗ್ನಿಶಾಮಕ ವಾಹನ, ಎರಡು ಆ್ಯಂಬುಲೆನ್ಸ್ ವಾಹನ, ಕ್ಷಿಪ್ರ ಕಾರ್ಯಾಚರಣೆ ಪಡೆ, ಬಾಂಬ್ ನಿಷ್ಕ್ರಿಯ ದಳ ತಂಡ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಳಿಕ ಮಾತನಾಡಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು, ಸ್ವಾತಂತ್ರೋತ್ಸವ ವೀಕ್ಷಿಸಲು ಬರುವ ಸಾರ್ವಜನಿಕರಿಗೆ ಮೊಟ್ಟಮೊದಲ ಬಾರಿಗೆ ಇ-ಪಾಸ್ ವಿತರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಒಟ್ಟು 3 ಸಾವಿರ ಇ-ಪಾಸ್ ವಿತರಣೆ ಮಾಡಲಾಗುತ್ತಿದ್ದು, ಸೇವಾ ಸಿಂಧು ಪೋರ್ಟಲ್ ನಲ್ಲಿ www.sevasindhu.karnataka.gov.in ನಲ್ಲಿ ಆಧಾರ್‌ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ ಇ-ಪಾಸ್ ಅನ್ನು ಪಡೆಯಬಹುದು. ಇದು ಸಂಪೂರ್ಣವಾಗಿ ಉಚಿತ. ಗೇಟ್ ಸಂಖ್ಯೆ 5 ರಲ್ಲಿ ಮೊಬೈಲ್ ಮೂಲಕ ತೋರಿಸಿ ಅಥವಾ ಇ-ಪಾಸ್ ಮುದ್ರಣವನ್ನು ಸಹ ಭದ್ರತಾ ಸಿಬ್ಬಂದಿಗೆ ತೋರಿಸಿ ಪ್ರವೇಶಿಸಬಹುದು.

ಒಂದು ಇ-ಪಾಸ್ ಒಬ್ಬರ ಪ್ರವೇಶಕ್ಕೆ ಮಾತ್ರ. ಸಾರ್ವಜನಿಕರಿಗೆ ಇ-ಪಾಸ್ ವಿತರಣೆ ಮಾಡುತ್ತಿರುವುದರಿಂದ ಮುದ್ರಿತ ಪಾಸ್ ವಿತರಿಸುವುದಿಲ್ಲ. ಗುರುವಾರ ಮಧ್ಯಾಹ್ನದ ವರೆಗೆ ಇ-ಪಾಸ್ ವಿತರಣೆ ಸಂಖ್ಯೆ ಪರಿಶೀಲಿಸಿ ಮುದ್ರಿತ ಪಾಸ್ ವಿತರಣೆ ಮಾಡುವ ಬಗ್ಗೆ ತೀರ್ಮಾನ ಮಾಡಲಾಗುವುದು. ಮುದ್ರಿತ ಪಾಸ್‌ಗಳನ್ನು ನಗರ ಜಿಲ್ಲಾಧಿಕಾರಿ ಕಚೇರಿ, ಸಹಾಯಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಮೈದಾನಕ್ಕೆ ಬರುವ ಸಾರ್ವಜನಿಕರಿಗೆ ಅಧಿಕಾರಿಗಳು ಕೆಲ ಸೂಚನೆಗಳನ್ನು ನೀಡಿದ್ದಾರೆ. ಸೂಚನೆಗಳು ಇಂತಿವೆ...

ಆ.15ರಂದು ಶುಕ್ರವಾರ ಬೆಳಗ್ಗೆ 8.30ರ ಒಳಗಾಗಿ ತಮ್ಮ ಆಸನದಲ್ಲಿ ಆಸೀನರಾಗಬೇಕು

ಮಣಿಪಾಲ್ ಸೆಂಟರ್‌ಕಡೆಯಿಂದ ಕಬ್ಬನ್‌ ರಸ್ತೆಯಲ್ಲಿ ಆಗಮಿಸಿ ಗೇಟ್ 5ರ ಮೂಲಕ ಪ್ರವೇಶ

ಯಾವುದೇ ಲಗೇಜ್ ಹಾಗೂ ಇತರೆ ವಸ್ತುಗಳನ್ನು ಕಾರ್ಯಕ್ರಮಕ್ಕೆ ತರುವಂತಿಲ್ಲ ಮೊಬೈಲ್, ಹೆಮ್ಮೆಟ್, ಕ್ಯಾಮೆರಾ, ರೇಡಿಯೋ, ಕೊಡೆ ತರುವಂತಿಲ್ಲ.

ಬಿಎಂಟಿಸಿ ಹಾಗೂ ಮೆಟ್ರೋ ಸೇವೆ ಬಳಸಬೇಕು. ಕುಡಿಯುವ ನೀರಿನ ವ್ಯವಸ್ಥೆಯಿದೆ

ಸಹಾಯಕ್ಕೆ 112ಗೆ ಕರೆ ಮಾಡಿ ಅಥವಾ ಸ್ಥಳದಲ್ಲಿನ ಪೊಲೀಸರ ಸಂಪರ್ಕಿಸಬಹುದು.

ಸಿಗರೇಟ್, ಬೆಂಕಿ ಪಟ್ಟಿಗೆ, ಕರಪತ್ರಗಳು, ಚಾಕು-ಚೂರಿ, ಹರಿತವಾದ ವಸ್ತುಗಳು, ತ್ರಿವರ್ಣ ಧ್ವಜ ಹೊರತು ಪಡಿಸಿ ಇತರೆ ಬಾವುಟ, ತಿಂಡಿ, ತಿನಿಸು, ಮದ್ಯದ ಬಾಟಲಿ, ಮಾದಕ ವಸ್ತು, ಶಸ್ತ್ರಾಸ್ತ್ರಗಳು, ಪಟಾಕಿ, ಸ್ಫೋಟಕ ವಸ್ತುಗಳು, ಬಣ್ಣದ ದ್ರವ, ವಿಡಿಯೋ ಹಾಗೂ ಸ್ಟಿಲ್ ಕ್ಯಾಮರಾ, ನೀರಿನ ಬಾಟಲಿ ಹಾಗೂ ಕ್ಯಾನ್‌ಗಳ ತರುವುದಕ್ಕೆ ನಿಷೇಧ ಹೇರಲಾಗಿದೆ.

ವಾಹನ ನಿಲುಗಡೆ ನಿಷೇಧ

  • ಸೆಂಟ್ರಲ್ ಸ್ಟ್ರೀಟ್- ಅನಿಲ್‌ಕುಂಬ್ಳೆ ವೃತ್ತದಿಂದ ಶಿವಾಜಿನಗರವರೆಗೆ

  • ಕಬ್ಬನ್ ರಸ್ತೆ-ಸಿಟಿಓ ವೃತ್ತದಿಂದ ಕೆಆ‌ ರಸ್ತೆ, ಕಬ್ಬನ್‌ ರಸ್ತೆ ಜಂಕ್ಷನ್‌ವರೆಗೆ

  • ಎಂಜಿ ರಸ್ತೆ - ಅನಿಲ್‌ಕುಂಬ್ಳೆ ವೃತ್ತದಿಂದ ಕ್ವೆನ್ಸ್ ವೃತ್ತದವರೆಗೆ

ರಸ್ತೆಗಳಲ್ಲಿ ಸಂಚಾರ ನಿರ್ಬಂಧ

  • ಕಬ್ಬನ್ ರಸ್ತೆ-ಬಿಆರ್‌ವಿ ಜಂಕ್ಷನ್ - ಕಾಮರಾಜ ರಸ್ತೆ ಜಂಕ್ಷನ್ ಎರಡೂ ಬದಿ

  • ಮಣಿಪಾಲ್ ಸೆಂಟರ್‌ಜಂಕ್ಷನ್‌ನಿಂದ ಬಿಆರ್್ರ ಜಂಕ್ಷನ್ ಕಡೆ ವಾಹನಗಳ ಸಂಚಾರ ನಿರ್ಬಂಧ

ಸಂಚಾರ ಸಲಹೆ

15/08/2025 ರಂದು ಬೆಳಿಗ್ಗೆ 08-00 ರಿಂದ ಬೆಳಿಗ್ಗೆ 11-00 ರವರೆಗೆ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ್ ರಸ್ತೆ ಜಂಕ್ಷನ್‌ಗೆ (ಎರಡೂ ದಿಕ್ಕುಗಳಲ್ಲಿ) ವಾಹನ ಸಂಚಾರವನ್ನು ತಿರುಗಿಸಲಾಗುತ್ತದೆ.

ಇನ್‌ಫೆಂಟ್ರಿ ರಸ್ತೆಯಿಂದ ಮಣಿಪಾಲ ಸೆಂಟರ್ ಕಡೆಗೆ ಬರುವ ವಾಹನಗಳು ಇನ್‌ಫೆಂಟ್ರಿ ರಸ್ತೆ - ಸಫಿನಾ ಪ್ಲಾಜಾ - ಎಡ ತಿರುವು - ಮೇನ್ ಗಾರ್ಡ್ ಕ್ರಾಸ್ ರಸ್ತೆ - ಅಲೈಸ್ ಸರ್ಕಲ್ - ಡಿಸ್ಪೆನ್ಸರಿ ರಸ್ತೆ - ಕಾಮರಾಜ ರಸ್ತೆ ಮತ್ತು ಡಿಕೆನ್ಸನ್ ರಸ್ತೆ ಜಂಕ್ಷನ್ - ಬಲ ತಿರುವು - ಕೆ.ಆರ್. ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್., - ಎಡ ತಿರುವು - ಕಬ್ಬನ್ ರಸ್ತೆ ಮೂಲಕ ಮಣಿಪಾಲ ಸೆಂಟರ್ ಜಂಕ್ಷನ್‌ಗೆ ಚಲಿಸಬೇಕು.

ಮಣಿಪಾಲ ಜಂಕ್ಷನ್‌ನಿಂದ ಕಬ್ಬನ್ ರಸ್ತೆಯಲ್ಲಿ ಬಿಆರ್‌ವಿ ಜಂಕ್ಷನ್ ಕಡೆಗೆ ಬರುವ ವಾಹನಗಳನ್ನು ಮಣಿಪಾಲ ಸೆಂಟರ್ ಬಳಿ ನಿಷೇಧಿಸಲಾಗಿದೆ. ಈ ವಾಹನಗಳು ವೆಬ್ಸ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಎಂ.ಜಿ. ರಸ್ತೆ-ಮೇಯೋಹಾಲ್ ಜಂಕ್ಷನ್ - ಆರ್ಟ್ಸ್ & ಕ್ರಾಫ್ಟ್ಸ್ ಜಂಕ್ಷನ್ - ಅನಿಲ್ ಕುಂಬ್ಳೆ ವೃತ್ತ - ಬಲ ತಿರುವು - ಬಿಆರ್‌ವಿ ಜಂಕ್ಷನ್ ಮೂಲಕ ಸೆಂಟ್ರಲ್ ಸ್ಟ್ರೀಟ್ ಕಡೆಗೆ ಚಲಿಸಬೇಕು.

ಅನಿಲ್ ಕುಂಬ್ಳೆ ವೃತ್ತದಿಂದ ಕಬ್ಬನ್ ರಸ್ತೆ ಕಡೆಗೆ ಬರುವ ವಾಹನಗಳು ನೇರವಾಗಿ ಸೆಂಟ್ರಲ್ ಸ್ಟ್ರೀಟ್ ಜಂಕ್ಷನ್ - ಬಲ ತಿರುವು - ಇನ್‌ಫೆಂಟ್ರಿ ರಸ್ತೆ - ಸಫಿನಾ ಪ್ಲಾಜಾ - ಎಡ ತಿರುವು - ಮೇನ್ ಗಾರ್ಡ್ ಕ್ರಾಸ್ ರಸ್ತೆ - ಅಲೈಸ್ ಸರ್ಕಲ್ - ಡಿಸ್ಪೆನ್ಸರಿ ರಸ್ತೆ - ಕಾಮರಾಜ ರಸ್ತೆ ಮತ್ತು ಡಿಕೆನ್ಸನ್ ರಸ್ತೆ ಜಂಕ್ಷನ್ - ಬಲ ತಿರುವು - ಕೆ.ಆರ್. ರಸ್ತೆ ಜಂಕ್ಷನ್ - ಎಡ ತಿರುವು ಮತ್ತು ಕಬ್ಬನ್ ರಸ್ತೆಯಿಂದ ಮಣಿಪಾಲ್ ಸೆಂಟರ್ ಜಂಕ್ಷನ್‌ಗೆ ಹೋಗುತ್ತವೆ.

ಭದ್ರತಾ ಕಾರಣಗಳಿಂದಾಗಿ ಪೆರೇಡ್‌ಗೆ ಹಾಜರಾಗುವ ಎಲ್ಲಾ ಆಹ್ವಾನಿತರು ಮೊಬೈಲ್ ಫೋನ್‌ಗಳು, ಹೆಲ್ಮೆಟ್‌ಗಳು, ಕ್ಯಾಮೆರಾಗಳು, ರೇಡಿಯೋ, ಛತ್ರಿ ಮತ್ತು ಇತರ ಉಪಕರಣಗಳನ್ನು ಪೆರೇಡ್ ಮೈದಾನಕ್ಕೆ ತರಬಾರದು. ಎಲ್ಲರೂ ಬೆಳಿಗ್ಗೆ 08.00 ಗಂಟೆಯ ಮೊದಲು ಕುಳಿತುಕೊಳ್ಳಲು ವಿನಂತಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT