ಬೆಂಗಳೂರು: ಸಂಚಾರಿ ಪೊಲೀಸರ ವಿರುದ್ಧವೇ ಅವಾಚ್ಯ ನಿಂದನೆ ಮಾಡಿ ಹೈಡ್ರಾಮಾ ಮಾಡಿದ್ದ ಹಿಂದಿ ಮಹಿಳೆ ವಿರುದ್ಧ ಬೆಂಗಳೂರು ಪೊಲೀಸರು ಕೊನೆಗೂ ಕ್ರಮ ಕೈಗೊಂಡಿದ್ದಾರೆ.
ನಿನ್ನೆ ಬೆಂಗಳೂರಿನ ಯಲಹಂಕ ಬಳಿಕ ಶೇಷಾದ್ರಿ ಪುರಂ ಕಾಲೇಜು ಬಳಿ ಮಹಿಳೆ ಮತ್ತು ಆಕೆಯ ಸಹ ಸವಾರ ನೋ ಪಾರ್ಕಿಂಗ್ ಜಾಗದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿದ್ದರು.
ಇದನ್ನು ಗಮನಿಸಿದ ಬೆಂಗಳೂರು ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದರು. ಸಂಚಾರಿ ಪೊಲೀಸರು ಬೈಕ್ ಗೆ ವೀಲ್ ಕ್ಯಾಪ್ ಹಾಕಿದ್ದರು.
ಈ ವೇಳೆ ಇದನ್ನು ಪ್ರಶ್ನಿಸಿ ಸಂಚಾರಿ ಪೊಲೀಸರ ವಿರುದ್ಧವೇ ಮಹಿಳೆ ಹರಿಹಾಯ್ದಿದ್ದರು.
ಪುರುಷ ಪೊಲೀಸ್ ಸಿಬ್ಬಂದಿ ಮಾತ್ರವಲ್ಲದೇ ಮಹಿಳಾ ಸಂಚಾರಿ ಪೊಲೀಸರ ವಿರುದ್ಧವೂ ಅವಾಚ್ಯ ನಿಂದನೆ ಮಾಡಿದ್ದರು. ಈ ವೇಳೆ ಪೊಲೀಸರು ಮಹಿಳೆ ಜೊತೆಗೆ ಕೆಲಸ ಮಾಡುತ್ತಿದ್ದ ಬೈಕ್ ಸವಾರನಿಗೆ ನೀವು ಈ ರೀತಿ ವರ್ತಿಸಿದರೆ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಲೇ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಕಿಡಿಕಾರಿದ್ದರು.
ಇದೀಗ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೊನೆಗೂ ಹಿಂದಿ ಭಾಷಿಕ ಮಹಿಳೆ ಮೇಲೆ ಬೆಂಗಳೂರು ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದು, ಮಹಿಳೆ ಮತ್ತು ಆಕೆಯ ಸಹ ಸವಾರನನ್ನು ವಶಕ್ಕೆ ಪಡೆದು ಇಬ್ಬರ ವಿರುದ್ಧ ಬಿಎನ್ಎಸ್ ಕಾಯ್ದೆ 132, 352, 79, 75 ಮತ್ತು ಇತರೆ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧಿತರನ್ನು ಮಹಮದ್ ಸರ್ಬಸ್ (ಸಹ ಸವಾರ) ಮತ್ತು 37 ವರ್ಷದ ಮಹಿಳೆ ಹಿರಲ್ವ್ಯಾಸ್ ಎಂದು ಗುರುತಿಸಲಾಗಿದೆ. ಇಬ್ಬರೂ ಯಲಹಂಕ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.