ಹುಬ್ಬಳ್ಳಿ: ಧರ್ಮಸ್ಥಳ ವಿಚಾರದಲ್ಲಿ ರಾಜ್ಯ ಸರ್ಕಾರ ಪ್ರಹಸನ ನಡೆಸಿದ್ದು, ಈ ಕೂಡಲೇ ಸದನಕ್ಕೆ ಮಧ್ಯಂತರ ವರದಿ ಸಲ್ಲಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ, ಧರ್ಮಸ್ಥಳದ ವಿಚಾರದಲ್ಲಿ ಕಾಣದ ಕೈಗಳ ಆಟ ನಡೆಯುತ್ತಿದೆ. ಅದಕ್ಕೆ ತಕ್ಕಂತೆ ರಾಜ್ಯ ಸರ್ಕಾರವೂ ತಾಳ ಹಾಕುತ್ತ ಕುಣಿಯುತ್ತಿದೆ ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೂ ಧರ್ಮದ ವಿಚಾರವಾಗಿ ಪದೇ ಪದೇ ಒಂದಿಲ್ಲೊಂದು ಸಮಸ್ಯೆಗಳನ್ನು ಸೃಷ್ಟಿಸುತ್ತಲೇ ಇದೆ. ಪವಿತ್ರ ಕ್ಷೇತ್ರಗಳ ಹೆಸರು ಹಾಳು ಮಾಡುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಸಹಿಷ್ಣುತೆಯ ಪರಮಾವಧಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂ ಧರ್ಮ ಹಾಗೂ ಧಾರ್ಮಿಕ ಸ್ಥಳಗಳ ಹೆಸರು ಕೆಡುವಂತೆ ಮಾಡುತ್ತಿರುವುದು ನಿಜಕ್ಕೂ ಅಸಹಿಷ್ಣುತೆಯ ಪರಮಾವಧಿ ಎಂದು ಸಚಿವ ಪ್ರಲ್ಹಾದ ಜೋಶಿ ಖಂಡಿಸಿದರು.
ಅನಾಮಿಕನ ಬಂಧನಕ್ಕೆ ಆಗ್ರಹ: ಅನಾಮಿಕ ಮುಸುಕುದಾರಿ ಒಂದೆರೆಡಲ್ಲ; ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎನ್ನುತ್ತಾನೆ. ಈತನ ವಿರುದ್ಧ ಕಾನೂನಾತ್ಮಕವಾದ ತನಿಖೆ ನಡೆಸಬೇಕು ಮತ್ತು ಆತನನ್ನು ಮೊದಲು ಬಂಧಿಸಬೇಕು ಎಂದು ಆಗ್ರಹಿಸಿದರು.
ಇಷ್ಟು ದಿನ ಕತ್ತೆ ಕಾಯುತ್ತಿದ್ದನೇ?: ಹತ್ತು ವರ್ಷದ ಹಿಂದೆ ನೂರಾರು ಮಹಿಳೆಯರ ಅದರಲ್ಲೂ ಅತ್ಯಾಚಾರಕ್ಕೆ ಒಳಗಾದವರ ಹೆಣಗಳನ್ನು ಹೂತು ಹಾಕಲಾಗಿದೆ ಎನ್ನುವ ಅನಾಮಿಕ,ಇಷ್ಟು ದಿನ ಏನು ಕತ್ತೆ ಕಾಯುತ್ತಿದ್ದನೇ? ಆಗಲೇ ಏಕೆ ದೂರು ಕೊಡಲಿಲ್ಲ? ಈವರೆಗೂ ಸುಮ್ಮನಿದ್ದದ್ದು ಏಕೆ? ಎಂದು ಪ್ರಶ್ನಿಸಿದರು.
ಸದನಕ್ಕೆ ತಕ್ಷಣ ಮಧ್ಯಂತ ವರದಿ ಸಲ್ಲಿಸಲಿ ಸರ್ಕಾರ: ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹಾಳು ಮಾಡಿರುವ ಈ ವ್ಯಕ್ತಿಯ ವಿರುದ್ಧ ಸರ್ಕಾರ ಕಾನೂನಾತ್ಮಕವಾಗಿ ತನಿಖೆ ನಡೆಸಬೇಕು. ಅಲ್ಲದೇ, ಇಷ್ಟು ದಿನ ನಡೆದ ಪ್ರಹಸನದ ಬಗ್ಗೆ ಈ ಕೂಡಲೇ ವಿಧಾನಸಭೆ ಅಧಿವೇಶನದಲ್ಲಿ ಸದನಕ್ಕೆ ಮಧ್ಯಂತರ ವರದಿ ಸಲ್ಲಿಸಬೇಕು ಎಂದು ಪ್ರಲ್ಹಾದ ಜೋಶಿ ಆಗ್ರಹಿಸಿದರು.
ಕೇರಳ ಸರ್ಕಾರಕ್ಕೇನು ಸಂಬಂಧ:? ಧರ್ಮಸ್ಥಳ ಪ್ರಕರಣದಲ್ಲಿ ಕೇರಳದವರೂ ಬರುತ್ತಿದ್ದಾರೆ. ಕೇರಳ ಸರ್ಕಾರಕ್ಕೇನು ಸಂಬಂಧ? ಎಂದು ಪ್ರಶ್ನಿಸಿದ ಸಚಿವರು, ಧರ್ಮಸ್ಥಳದ ಹೆಸರು ಹಾಳು ಮಾಡುವುದು ಮತ್ತು ಹಿಂದೂಗಳ ನಂಬಿಕೆ ಕ್ಷೇತ್ರದ ವಿರುದ್ಧ ಷಡ್ಯಂತರ ನಡೆಸುವುದೇ ಇದರ ಉದ್ದೇಶವಾಗಿದೆ ಎಂದು ಹರಿಹಾಯ್ದರು.
ಧರ್ಮಸ್ಥಳದ ಬಗ್ಗೆ ಹಿಂದೂಗಳ ನಂಬಿಕೆಗೆ ಧಕ್ಕೆ ತರುವುದು ಮತ್ತು ಮಂಜುನಾಥನ ಸನ್ನಿಧಿಗೆ ಏಕೆ ಹೋಗುತ್ತೀರಿ? ಧರ್ಮಸ್ಥಳಕ್ಕೆ ಏಕೆ ಹೋಗುತ್ತೀರಿ? ಎಂಬಂತಹ ವಾತಾವರಣ ನಿರ್ಮಿಸುವ ವ್ಯವಸ್ಥಿತ ಷಡ್ಯಂತ್ರ ಇದಾಗಿದೆ ಎಂದು ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು.