ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ದೊಡ್ಡ ತಾಂತ್ರಿಕ ಸಮಸ್ಯೆಯೊಂದು ಬೆಳಕಿಗೆ ಬಂದಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ ಏಳು ಗೇಟ್‌ಗಳು ಬೆಂಡ್ ಆಗಿವೆ ಎಂದು ಡ್ಯಾಂ ಸೇಫ್ಟಿ ರೀವಿವ್ ಕಮೀಟಿ ವರದಿ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಕೊಪ್ಪಳ ಜಿಲ್ಲೆಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ತುಂಗಭದ್ರಾ ಡ್ಯಾಂನಲ್ಲಿ 7 ಗೇಟ್‌ಗಳು ಬೆಂಡ್ ಆಗಿದ್ದು, ಇದರಿಂದ ಜಲಾಶಯದ ಸುರಕ್ಷತೆ ಪ್ರಶ್ನಾರ್ಥಕವಾಗಿದೆ ಎಂದು ತಿಳಿಸಿದ್ದಾರೆ.
ಸಚಿವರ ಪ್ರಕಾರ, ಡ್ಯಾಂ ಸೇಫ್ಟಿ ರಿವ್ಯೂ ಕಮಿಟಿಯ ವರದಿ ಪ್ರಕಾರ, ಗೇಟ್ ಸಂಖ್ಯೆ 4, 11, 18, 20, 24, 27 ಹಾಗೂ 28 ಬೆಂಡ್ ಆಗಿವೆ. ಇವರಲ್ಲಿ 6 ಗೇಟ್‌ಗಳನ್ನು ಸಂಪೂರ್ಣವಾಗಿ ಎತ್ತಲು ಅಥವಾ ಇಳಿಸಲು ಸಾಧ್ಯವಾಗುತ್ತಿಲ್ಲ.
ಗೇಟ್ ಸಂಖ್ಯೆ 4 ಅನ್ನು ಕೇವಲ ಎರಡು ಅಡಿ ಮಟ್ಟದವರೆಗೆ ಮಾತ್ರ ಎತ್ತಬಹುದು. ಇದರಿಂದಾಗಿ, ಜಲಾಶಯದಿಂದ ನೀರನ್ನು ನಿಯಂತ್ರಿತವಾಗಿ ಬಿಡುಗಡೆ ಮಾಡುವಲ್ಲಿ ತೊಂದರೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.
ಒಂದು ಗೇಟ್ ಕೊಚ್ಚಿ ಹೋದಾಗಲೇ ಅಪಾರ ಪ್ರಮಾಣದ ನೀರು ಪೋಲಾಗಿತ್ತು. ಇದೀಗ ಏಳು ಗೇಟ್‌ಗಳು ಬೆಂಡ್ ಆಗಿದ್ದು, ಯಾವಾಗ ಏನಾಗುತ್ತದೆ ಎಂಬ ಆತಂಕ ಕಾಡುತ್ತಿದೆ. ಈ ಬಾರಿ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾದ ಕಾರಣ ಹೆಚ್ಚಿನ ಪ್ರಮಾಣದ ನೀರು ಜಲಾಶಯಕ್ಕೆ ಬಂದಿದೆ. ನೀರಿನ ಒತ್ತಡದಿಂದ ಈ 7 ಗೇಟ್ಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ
2024ರ ಆಗಸ್ಟ್ 10 ರಂದು, ತುಂಗಭದ್ರಾ ಡ್ಯಾಂನ 19ನೇ ಗೇಟ್ ಕಿತ್ತು ಹೋಗಿ, ಅಪಾರ ಪ್ರಮಾಣದ ನೀರು ಹರಿದು ಹೋಗಿತ್ತು. ಘಟನೆಯ ನಂತರ ತಜ್ಞರ ಸಮಿತಿ ಎಲ್ಲ ಗೇಟ್‌ಗಳನ್ನು ಬದಲಾಯಿಸುವ ಶಿಫಾರಸು ಮಾಡಿದ್ದರೂ, ಒಂದು ವರ್ಷವಾದರೂ ಹೊಸ ಗೇಟ್ ಅಳವಡಿಸುವ ಕಾರ್ಯ ಪ್ರಾರಂಭವಾಗಿಲ್ಲ. ಇದೀಗ 7 ಗೇಟ್‌ಗಳು ಅಪಾಯದ ಅಂಚಿನಲ್ಲಿ ಇವೆ ಎಂಬ ವಿಚಾರ ತಿಳಿದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಸದ್ಯ ಜಲಾಶಯದಲ್ಲಿ ಸುಮಾರು 80 ಟಿಎಮ್‌ಸಿ ನೀರು ಸಂಗ್ರಹವಾಗಿದೆ. 3 ಗೇಟ್‌ಗಳ ಮೂಲಕ 13,000 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.