ಶನಿವಾರ ನಗರ್ತಪೇಟೆಯಲ್ಲಿ ಸಂಭವಿಸಿದ ಅಗ್ನಿ ದುರಂತ ಸ್ಥಳಕ್ಕೆ ಇಂದು ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದರು.
ದುರಂತ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಡಿಸಿಎಂ, ಅಕ್ರಮವಾಗಿ ಕಟ್ಟಡ ನಿರ್ಮಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಅನಧಿಕೃತ ಕಟ್ಟಡಗಳಿಗೆ ನೋಟಿಸ್ ನೀಡುವಂತೆ ಬಿಬಿಎಂಪಿ ಸೂಚನೆ ನೀಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಕ್ರವಾಗಿ ಈ ಕಟ್ಟಡ ಕಟ್ಟಲಾಗಿದೆ. ಈ ಪರಿಸ್ಥಿತಿಗೆ ನಮ್ಮ ಸಾರ್ವಜನಿಕರನ್ನೇ ದೂರಬೇಕು ಎಂದಿದ್ದಾರೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡುತ್ತೇವೆ. ಬಾಡಿಗೆ ಮಾತ್ರ ತೆಗೆದುಕೊಳ್ಳುತ್ತೀರಾ ಅಂದರೆ ಸೇಫ್ಟಿ ಮಾಡಬೇಕು. ಸೇಫ್ಟಿ ಮಾಡಿಕೊಳ್ಳಲಿಲ್ಲ ಅಂದರೆ ಕಟ್ಟಡ ಮಾಲೀಕರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇನ್ನು ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಪೊಲೀಸು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕಟ್ಟಡ ಮಾಲೀಕರನ್ನು ಬಂಧನಕ್ಕೊಳಪಡಿಸಲಾಗಿದೆ.
ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸುಕುದಾರಿ ಸಾಕ್ಷಿದಾರನ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ 'ಮೊದಲು ಆತನ ಮಂಪರು ಪರೀಕ್ಷೆ ಮಾಡಿ' ಎಂದು ಒತ್ತಾಯಿಸಿದ್ದಾರೆ.'ಸುಳ್ಳು ಆರೋಪ ಮಾಡುವವರಿಗೆ ಇದು ಎಚ್ಚರಿಕೆ ಗಂಟೆ ಆಗಬೇಕು ಅಂತೆಯೇ ಮುಸುಕುಧಾರಿಯನ್ನಿಟ್ಟುಕೊಂಡು ಒಳಸಂಚು ಮಾಡ್ತಿದ್ದಾರಾ ನೋಡಬೇಕು. ಯಾರಿಗೂ ಕಳಂಕ ತರುವ ಕೆಲಸ ಯಾರೂ ಮಾಡಿದರೂ ಒಳಸಂಚು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದು ಸರ್ಕಾರ ಅಥವಾ ಪಕ್ಷದ ನಿಲುವಲ್ಲ ಇದು ನನ್ನ ವೈಯಕ್ತಿಕ ಹೇಳಿಕೆ ಎಂದು ಸವದಿ ಹೇಳಿದ್ದಾರೆ.ಇನ್ನು ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಕೊಲೆಯಾದ ಮಹಿಳೆಯ ಶವವನ್ನು ತರಾತುರಿಯಲ್ಲಿ ವಿಲೇವಾರಿ ಮಾಡಿರುವ ಕುರಿತು ಮತ್ತೊಂದು ದೂರು ಸಲ್ಲಿಕೆಯಾಗಿದೆ. ಸಾಮಾಜಿಕ ಹೋರಾಟಗಾರ ಜಯಂತ್ ಎಂಬುವವರು ದೂರು ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಕುರಿತು ಪದೇ ಪದೇ ಹೇಳಿಕೆ ನೀಡುತ್ತಿದ್ದ ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾಗೆ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ನೊಟೀಸ್ ಜಾರಿಗೊಳಿಸಿದೆ.
'ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಪಕ್ಷದಲ್ಲಿ ಗೊಂದಲ ಹಾಗೂ ಮುಜುಗರ ಉಂಟು ಮಾಡುವ ರೀತಿಯ ಹೇಳಿಕೆಗಳನ್ನು ನೀಡಿದ್ದೀರಿ. ತಮ್ಮ ಈ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ ಉಂಟುಮಾಡಿದೆ. ಈ ಅಶಿಸ್ತಿನ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಈ ನೋಟಿಸ್ ನೀಡಲಾಗಿದೆ.ಏಳು ದಿನಗಳಲ್ಲಿ ನಿಮ್ಮ ಹೇಳಿಕೆಗಳ ಕುರಿತು ಸಮಜಾಯಿಷಿ ನೀಡಬೇಕು' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಆರ್‌ಎಸ್‌ಎಸ್ ಭಾರತದ ತಾಲಿಬಾನ್ ಇದ್ದಂತೆ ಎಂದು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್‌ಎಸ್‌ಎಸ್ ಹೊಗಳಿದ್ದಕ್ಕಾಗಿ ಹರಿ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಆರ್‌ಎಸ್‌ಎಸ್ ನವರು ದೇಶದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ. ನಾನು ಆರ್‌ಎಸ್‌ಎಸ್ ಅನ್ನು ತಾಲಿಬಾನ್‌ಗೆ ಮಾತ್ರ ಹೋಲಿಸುತ್ತೇನೆ, ಅವರು ಭಾರತೀಯ ತಾಲಿಬಾನ್‌ಗಳು ಮತ್ತು ಪ್ರಧಾನಿ ಅವರನ್ನು ಕೆಂಪು ಕೋಟೆಯಿಂದ ಶ್ಲಾಘಿಸುತ್ತಿದ್ದಾರೆ" ಎಂದು ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಯಾವುದೇ 'ಸಂಘಿ' ಇದ್ದರಾ? ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದ್ದು, ಬೆಂಗಳೂರು ಸೇರಿದಂತೆ ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿಗೆ ಭಾರತೀಯ ಹವಾಮಾನ ಇಲಾಖೆ, ರೆಡ್ ಅಲರ್ಟ್ ಘೋಷಿಸಿದೆ. ಆಗಸ್ಟ್ 18 ಮತ್ತು 19 ರಂದು ಮುಂದಿನ ಎರಡು ದಿನಗಳಲ್ಲಿ ಜಿಲ್ಲೆಗಳಲ್ಲಿ "ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯಿಂದಾಗಿ 15 ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ಸಕಲೇಶಪುರ ತಾಲೂಕಿನ ಎಡಕುಮಾರಿ ಸಮೀಪ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿದ್ದು, ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗ ತಾತ್ಕಾಲಿಕ ಬಂದ್ ಆಗಿದೆ. ಶಿರಾಡಿಘಾಟ್ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತ ಉಂಟಾಗಿದೆ. ಮತ್ತೊಂದೆಡೆ ಮಾರನಹಳ್ಳಿ ಸಮೇಪ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದಿದೆ. ಮಳೆ ನಡುವೆಯೂ ಪೊಲೀಸರು ಕಾರಿನಲ್ಲಿದ್ದವರನ್ನ ರಕ್ಷಿಸಿದ್ದಾರೆ.