ಬೆಂಗಳೂರು: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದಲ್ಲಿ ಸಾಕ್ಷಿ-ದೂರುದಾರ ವ್ಯಕ್ತಿ ಹೇಳಿದ ಹಾಗೆ ಅಗೆಯುತ್ತಲೇ ಇರಲು ಸಾಧ್ಯವಿಲ್ಲ, ವಿಶೇಷ ತನಿಖಾ ದಳದ ಅಧಿಕಾರಿಗಳು ಎಲ್ಲವನ್ನೂ ತೀರ್ಮಾನ ಮಾಡಲಿದ್ದಾರೆಂದು ರಾಜ್ಯ ಸರ್ಕಾರ ಭಾನುವಾರ ಹೇಳಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಸ್ಥಿಪಂಜರದ ಅವಶೇಷಗಳಿಗಾಗಿ ಎಷ್ಟು ಸಮಯದವರೆಗೆ ಅಗೆಯಬೇಕು ಎಂಬುದನ್ನು ನಿರ್ಧರಿಸುತ್ತದೆ, ದೂರುಗಳ ಆಧಾರದ ಮೇಲೆ ಅಗೆಯುತ್ತಲೇ ಇರಲು ಸಾಧ್ಯವಿಲ್ಲ. ಎಲ್ಲದಕ್ಕೂ ಒಂದು ಅಂತ್ಯ ಇರಬೇಕು ಹೇಳಿದರು.
ಈ ವಿಷಯವನ್ನು ಯಾರೂ ರಾಜಕೀಯಗೊಳಿಸಬಾರದು, ಧಾರ್ಮಿಕ ಬಣ್ಣ ನೀಡಬಾರದು. ಇದು ಕಾನೂನು ಸಮಸ್ಯೆಯಾಗಿದ್ದು, ದೂರು ಸ್ವೀಕರಿಸುವುದು ಮತ್ತು ಎಫ್‌ಐಆರ್ ದಾಖಲಿಸುವುದು ಪೊಲೀಸರ ಕರ್ತವ್ಯ. ಪೊಲೀಸರು ಪ್ರಕರಣವನ್ನು ಮುಂದುವರಿಸುತ್ತಾರೆ. ಕಾನೂನು ನಿಬಂಧನೆಗಳ ಪ್ರಕಾರ ಬೇರೆ ರೀತಿಯಲ್ಲಿ ನಿರ್ಧರಿಸುತ್ತಾರೆಂದು ತಿಳಿಸಿದರು.
ಬಿಜೆಪಿ ನಾಯಕರು ಧರ್ಮಸ್ಥಳ ಚಲೋ ಪ್ರತಿಭಟನೆ ನಡೆಸುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ಅಧಿವೇಶನದಲ್ಲಿ ಹೇಳಿಕೆ ನೀಡುವುದಾಗಿ ಹೇಳಿದರು.
ಸತ್ಯವನ್ನು ತಿಳಿಯಲು, ತನಿಖೆಯನ್ನು ಪೂರ್ಣಗೊಳಿಸಲು ಎಸ್‌ಐಟಿಗೆ ಅವಕಾಶ ನೀಡಬೇಕು. ಸರ್ಕಾರ ಎಸ್‌ಐಟಿಗೆ ಯಾವುದೇ ನಿರ್ದೇಶನ ನೀಡಿಲ್ಲ. ತನಿಖೆಯ ಮೇಲೆ ಪ್ರಭಾವ ಬೀರಿಲ್ಲ. ಮಧ್ಯಂತರ ಅಥವಾ ಅಂತಿಮ ವರದಿಯನ್ನು ಮಂಡಿಸುವುದು ಎಸ್‌ಐಟಿಗೆ ಬಿಟ್ಟದ್ದು ಎಂದರು.
ಧರ್ಮಸ್ಥಳದ ವಿರುದ್ಧ ಪಿತೂರಿ ನಡೆಯುತ್ತಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಲಿ, ಅದು ಅವರ ವೈಯಕ್ತಿಕ ಅಭಿಪ್ರಾಯ, ಆದರೆ, ಅದನ್ನು ರಾಜಕೀಯಗೊಳಿಸಬಾರದು ಎಂದು ಹೇಳಿದರು.
ಇದೇ ವೇಳೆ ಒಳ ಮೀಸಲಾತಿ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದೂ ಸಚಿವರು ತಿಳಿಸಿದರು. ಒಳ ಮೀಸಲಾತಿಯನ್ನು ಹೇಗೆ ಜಾರಿಗೆ ತರಬೇಕು ಎಂಬುದನ್ನು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಒಳಮೀಸಲಾತಿ ಜಾರಿ ಮಾಡುವುದಕ್ಕೆ ಬದ್ಧವಾಗಿದೆ. ಇದಕ್ಕಾಗಿ ನಾವು ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿ ಮಾಡಿದ್ದೇವೆ, ವರದಿ ಬಂದಿದೆ. 19ರಂದು ವಿಶೇಷ ಕ್ಯಾಬಿನೆಟ್ ಸಭೆ ಮಾಡಿ ಅಲ್ಲಿ ತೀರ್ಮಾನ ಮಾಡುತ್ತೇವೆ. ಪರ-ವಿರೋಧ ಮಾಡುವವರು ಮಾಡೇ ಮಾಡುತ್ತಾರೆ. ಅನ್ಯಾಯ ಆದಾಗ ಅನ್ಯಾಯ ಅಂತ ಹೇಳುವುದರಲ್ಲಿ ತಪ್ಪೇನಿದೆ? ಸರ್ಕಾರ ಆ ಅನ್ಯಾಯವನ್ನು ಸರಿಪಡಿಸಬೇಕಲ್ವಾ, ಸರ್ಕಾರ ಆ ಕೆಲಸ ಮಾಡುತ್ತೆ ಎಂದರು.
ರಾಜ್ಯಾದ್ಯಂತ ಪಿಎಸ್ಐಗಳ ಕೊರತೆ ಬಗ್ಗೆ ಮಾತನಾಡಿ, ಪಿಎಸ್ಐ ನೇಮಕಾತಿ ವಿಚಾರದಲ್ಲಿ ಈ ಹಿಂದಿನ ಸರ್ಕಾರದಲ್ಲಿ ಹಗರಣ ಆಗಿತ್ತು. 545 ಪಿಎಸ್ಐಗಳ ನೇಮಕ ಅಕ್ರಮ ಸಾಬೀತಾಗಿತ್ತು. ಕಳೆದ ಐದಾರು ವರ್ಷಗಳಿಂದ ನೇಮಕಾತಿ ನಿಂತಿತ್ತು. ಇವತ್ತು ಸಾವಿರಾರು ಪಿಎಸ್ಐ ಹುದ್ದೆಗಳು ಖಾಲಿ ಇದೆ. 545 ಮಂದಿ ತರಬೇತಿಯಲ್ಲಿದ್ದಾರೆ. 402 ಮಂದಿಗೆ ಮೆಡಿಕಲ್ ಟೆಸ್ಟ್ ನಡೆಯುತ್ತಿದೆ. 15 ದಿನದಲ್ಲಿ ಅವರಿಗೆ ಆದೇಶ ನೀಡುತ್ತೇವೆ ಎಂದು ತಿಳಿಸಿದರು.