ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಆರ್ಥಿಕ ಕೊರತೆ ಸೃಷ್ಟಿ ಮಾಡಿದ್ದು, ಮೂಲಸೌಕರ್ಯಗಳ ಅನುದಾನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿ (ಸಿಎಜಿ) ವ್ಯಾಖ್ಯಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ವಿಧಾನಸಭೆಯಲ್ಲಿ 2023-24ನೇ ಸಾಲಿಗೆ ಕೊನೆಗೊಂಡ ರಾಜ್ಯದ ಹಣಕಾಸು ವ್ಯವಹಾರಗಳ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿದರು.
ವರದಿಯಲ್ಲಿ 2023-24ರಲ್ಲಿನ ರಾಜ್ಯದ ಆರ್ಥಿಕ ಪರಿಸ್ಥಿತಿ, ಪಂಚ ಗ್ಯಾರಂಟಿಗಳಿಂದ ಎದುರಾಗುತ್ತಿರುವ ಆರ್ಥಿಕ ಪರಿಣಾಮಗಳ ಕುರಿತಂತೆ ಹಲವು ಅಂಶಗಳನ್ನು ವಿವರಿಸಲಾಗಿದೆ.
ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ವೆಚ್ಚ ಮಾಡಿದ ಪರಿಣಾಮ 2023-24ನೇ ಸಾಲಿನಲ್ಲಿ 9,271 ಕೋಟಿ ರು. ರಾಜಸ್ವ ಕೊರತೆ ಉಂಟಾಗಿದೆ. ಅಲ್ಲದೆ, ವಿತ್ತೀಯ ಕೊರತೆ 65,522 ಕೋಟಿ ರೂ.ಗೆ ಏರಿಕೆಯಾಗುವಂತಾಗಿದೆ ಎಂದು ಸಿಎಜಿ ವ್ಯಾಖ್ಯಾನಿಸಿದೆ.
ವಿತ್ತೀಯ ಕೊರತೆ ಮತ್ತು ರಾಜಸ್ವ ಕೊರತೆಯನ್ನು ಸರಿದೂಗಿಸಲು ರಾಜ್ಯ ಸರ್ಕಾರ 63 ಸಾವಿರ ಕೋಟಿ ರೂ. ನಿವ್ವಳ ಮಾರುಕಟ್ಟೆ ಸಾಲವನ್ನು ಪಡೆದುಕೊಂಡಿದೆ. 2022-23ಕ್ಕೆ ಹೋಲಿಸಿದರೆ 37 ಸಾವಿರ ಕೋಟಿ ರೂ. ಹೆಚ್ಚಿನ ನಿವ್ವಳ ಮಾರುಕಟ್ಟೆ ಸಾಲ ಪಡೆಯಲಾಗಿದೆ. ಗ್ಯಾರಂಟಿ ಯೋಜನೆಗಳ ಕಾರಣದಿಂದಲೇ ಬಂಡವಾಳ ವೆಚ್ಚವನ್ನು 5,229 ಕೋಟಿ ರೂ. ಕಡಿಮೆ ಮಾಡಲಾಗಿದೆ ಎಂದು ವರದಿ ಯಲ್ಲಿ ಉಲ್ಲೇಖಿಸಲಾಗಿದೆ.
ಬಂಡವಾಳ ವೆಚ್ಚದಲ್ಲಿ ಕಡಿಮೆ ಮಾಡುವುದರಿಂದ ಬಂಡವಾಳ ರಚನೆಯಲ್ಲಿ ಈ ಕೊರತೆಯು ಭವಿಷ್ಯದ ಬೆಳವಣಿಗೆಗೆ ಹಾನಿಕಾರ. ಜೊತೆಗೆ ಪಂಚ ಗ್ಯಾರಂಟಿಗಳ ಅನುಷ್ಠಾನವು ರಾಜ್ಯದ ಸಂಪನ್ಮೂಲಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
ಬಂಡವಾಳ ವೆಚ್ಚದಲ್ಲಿನ ಕಡಿತವು ಅಪೂರ್ಣ ಯೋಜನೆಗಳ ಸಂಖ್ಯೆಯನ್ನು 1,864 ರಿಂದ 3,140 ಕ್ಕೆ ಹೆಚ್ಚಿಸಿದ್ದು, ಒಟ್ಟು 4,482 ಕೋಟಿ ರೂ.ಗಳಷ್ಟು ಹಣವನ್ನು ಅಪೂರ್ಣ ಯೋಜನೆಗಳಿಗೆ ಬಳಕೆ ಮಾಡಲಾಗಿದೆ. ಪಂಚ ಗ್ಯಾರಂಟಿಗಳಿಗೆ ಹಣ ಒದಗಿಸಲು 63,000 ಕೋಟಿ ರೂ. ನಿವ್ವಳ ಮಾರುಕಟ್ಟೆ ಸಾಲು ಪಡೆದುಕೊಳ್ಳುವಂತಾಗುವ ಜತೆಗೆ ಮೂಲಸೌಕರ್ಯಕ್ಕೆ ವಿನಿಯೋಗಿಸುವ ಬಂಡವಾಳ ವೆಚ್ಚದಲ್ಲಿ 5,229 ಕೋಟಿ ರೂ. ಕಡಿತವಾಗಿದೆ. ಗ್ಯಾರಂಟಿ ಯೋಜನೆಗಳು ಆದಾಯ ವೆಚ್ಚದ ಶೇಕಡಾ 15 ರಷ್ಟಿದ್ದು, ಇದು ವೆಚ್ಚದ ಬೆಳವಣಿಗೆಯಲ್ಲಿ ಹೆಚ್ಚಳಕ್ಕೆ ಕಾರಣವಾಯಿತು (ಹಿಂದಿನ ವರ್ಷಕ್ಕಿಂತ ಶೇಕಡಾ 12.54) ಇದು 9,271 ಕೋಟಿ ಆದಾಯ ಕೊರತೆಗೆ ಕಾರಣವಾಗಿದೆ.
ಪರಿಣಾಮ ರಾಜ್ಯದ ಹಣಕಾಸಿನ ಕೊರತೆಯು 2022-23ನೇ ಸಾಲಿನಲ್ಲಿ 46,623 ಕೋಟಿ ರು.ನಿಂದ 2023-24ನೇ ಸಾಲಿಗೆ 65,522 ಕೋಟಿ ರು.ಗೆ ಹೆಚ್ಚಳವಾಗಿದೆ. ಗ್ಯಾರಂಟಿ ಯೋಜನೆಗಳು ಮತ್ತು ಅದರಿಂದ ಉಂಟಾದ ಕೊರತೆಗಳಿಗೆ ಹಣಕಾಸು ಒದಗಿಸುವ ಸಲುವಾಗಿಯೇ ಈ ಕೊರತೆ ಉಂಟಾಗಿದ್ದಲ್ಲದೆ, 63 ಸಾವಿರ ಕೋಟಿ ರು. ನಿವ್ವಳ ಮಾರುಕಟ್ಟೆ ಸಾಲವನ್ನು ಪಡೆದುಕೊಂಡಿದೆ. ಅಲ್ಲದೆ, 2023-24ನೇ ಸಾಲಿನಲ್ಲಿ ನ ರಾಜಸ್ವ ವೆಚ್ಚದ ಶೇ. 15ರಷ್ಟು ಪಾಲನ್ನು ಗ್ಯಾರಂಟಿ ಯೋಜನೆಗಳು ಹೊಂದಿವೆ ಎಂದು ತಿಳಿಸಲಾಗಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು (ಜಿ ಎಸ್ ಡಿಪಿ) 2019-20ಕ್ಕೆ ಹೋಲಿಸಿದರೆ 2023- 24ರಲ್ಲಿ ಶೇ.11.84ರಷ್ಟು ಹೆಚ್ಚಳವಾಗಿದೆ.
ಸರ್ಕಾರವು ಮಾರ್ಚ್ 31, 2024 ರ ಹೊತ್ತಿಗೆ ಸರ್ಕಾರಿ ಕಂಪನಿಗಳು/ನಿಗಮಗಳಲ್ಲಿ ರೂ 73,487 ಕೋಟಿ ಹೂಡಿಕೆ ಮಾಡಿತ್ತು. ಈ ಕಂಪನಿಗಳು/ನಿಗಮಗಳಿಂದ ಬರುವ ಆದಾಯವು ಅತ್ಯಲ್ಪವಾಗಿತ್ತು (ರೂ 290.74 ಕೋಟಿ). ಸಾಲಗಳು ಬಂಡವಾಳ ವೆಚ್ಚವನ್ನು 38,160 ಕೋಟಿ ರೂ.ಗಳಷ್ಟು ಹೆಚ್ಚಿಸಿದ್ದು, ಈ ಮೊತ್ತವನ್ನು ಐದು ಖಾತರಿಗಳ ಪೂರೈಸಲು ಬಳಸಲಾಗಿದೆ.
2019-20ರಲ್ಲಿ 16.15 ಲಕ್ಷ ಕೋಟಿ ರು.ಗಳಿಷ್ಟಿದ್ದ ಜಿಎಸ್‌ಡಿಪಿ ದರ, 2023-24ಕ್ಕೆ 25.67 ಲಕ್ಷ ಕೋಟಿ ರೂ.ಗಳಷ್ಟಾಗಿದೆ. ಅಲ್ಲದೆ, 2022-23ಕ್ಕೆ ಹೋಲಿಸಿದರೆ 2023-24ರಲ್ಲಿ ಶೇ. 13.10ರಷ್ಟು ಬೆಳವಣಿಗೆ ಸಾಧಿಸಿದೆ. ಇನ್ನು, ರಾಜಸ್ವ ಸ್ವೀಕೃತಿಯು 2022-23ಕ್ಕೆ ಹೋಲಿಸಿದರೆ 2023-24ನೇ ಸಾಲಿನಲ್ಲಿ ಶೇ.1.86ರಷ್ಟು ಹೆಚ್ಚಳವಾಗಿದೆ.
ಹಾಗೆಯೇ, ರಾಜ್ಯದ ಒಟ್ಟು ವೆಚ್ಚವು ಹಿಂದಿನ ವರ್ಷಕ್ಕೆ ಹೋಲಿಸಿದರೆ (2.76 ಲಕ್ಷ ಕೋಟಿ ರೂ,) 2023-24ನೇ ಸಾಲಿನಲ್ಲಿ (2.99 ಲಕ್ಷ ಕೋಟಿ ರೂ.) ಶೇ. 8.34ರಷ್ಟು ಏರಿಕೆಯಾಗಿದೆ. ಆದರೆ, ಜಿಎಸ್‌ಡಿಪಿಗೆ ಇರುವ ಅನುಪಾತವು ಹಿಂದಿನ ವರ್ಷ ಶೇ.12.17ರ ಷ್ಟಿದ್ದರೆ 2023-24ರಲ್ಲಿ ಶೇ. 11.65ಕ್ಕೆ ಕುಸಿದಿದೆ.
504.29 ಕೋಟಿ ರು. ರಾಜಸ್ವ ವೆಚ್ಚವನ್ನು ಬಂಡವಾಳ ವೆಚ್ಚವೆಂದು ಮತ್ತು 0.01 ಕೋಟಿ ರು. ಬಂಡವಾಳ ವೆಚ್ಚವನ್ನು ರಾಜಸ್ವ ವೆಚ್ಚವೆಂದು ತಪ್ಪಾಗಿ ವರ್ಗೀಕರಣ ಮಾಡಿದ ಪರಿಣಾಮ 504.28 ಕೋಟಿ ರೂ. ರಾಜಸ್ವ ವೆಚ್ಚ ಕೊರತೆಯನ್ನು ಕಡಿಮೆಯಾಗಿ ಹೇಳಲಾಗಿದೆ. ಅಲ್ಲದೆ, 2023-24ನೇ ಸಾಲಿನ ರಾಜ್ಯ ಬಜೆಟ್ ಅಂದಾಜಿಗಿಂತ ಶೇ. 3.42ರಷ್ಟು ಕಡಿಮೆ ಖರ್ಚು ಮಾಡಿದ್ದು, ಕಳೆದೆರಡು ವರ್ಷಗಳಲ್ಲಿ ಕನಿಷ್ಠ ವ್ಯತ್ಯಾಸವನ್ನು ಕಾಣುತ್ತಿರುವ ರಾಜ್ಯವು ಬಜೆಟ್ ಮತ್ತು ವಾಸ್ತವಿಕ ಅಂಕಿ- ಅಂಶಗಳ ನಡುವಿನ ವ್ಯತ್ಯಾಸದಲ್ಲಿ ಏರಿಕೆ ಕಂಡಿದೆ ಎಂದು ಸಿಎಜಿ ತಿಳಿಸಿದೆ.
2022-23ನೇ ಸಾಲಿಗೆ ಹೋಲಿಸಿದರೆ 2023-24ನೇ ಸಾಲಿನಲ್ಲಿ ಸ್ವಂತ ತೆರಿಗೆ ಆದಾಯ ಅಥವಾ ಸಂಪನ್ಮೂಲಗಳ ಸ್ವೀಕೃತಿಯಲ್ಲಿ ಹೆಚ್ಚಳವಾಗಿದೆ. 2023-24ನೇ ಸಾಲಿನಲ್ಲಿ ಒಟ್ಟು ರಾಜಸ್ವ ಸ್ವೀಕೃತಿಗಳಲ್ಲಿ ರಾಜ್ಯದ ಸ್ವಂತ ಸಂಪನ್ಮೂಲಗಳ ಪ್ರಮಾಣ ಶೇ. 76ರಷ್ಟಿದ್ದು, 2022-238 ಹೋಲಿಸಿದರೆ ಸ್ವಂತ ತೆರಿಗೆ ಆದಾಯ ಶೇ.13.78ರಷ್ಟು ಹೆಚ್ಚಳವಾಗಿದೆ ಎಂದು ಸಿಎಜಿ ಗಮನ ಸೆಳೆದಿದೆ.