ಬೆಂಗಳೂರು: ಸದಾ ಒಂದಲ್ಲಾ ಒಂದು ವಿಚಾರಕ್ಕೆ ವಿವಾದ, ಸುದ್ದಿಯಲ್ಲಿರುವ ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿ, ವಕೀಲ ಜಗದೀಶ್ ಆರೆಸ್ಟ್ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಲಾಯರ್ ಜಗದೀಶ್ ಅವರು ಜಾತಿ ನಿಂದನೆ ಮಾಡಿದ್ದರಂತೆ. ಈ ಹಿನ್ನೆಲೆಯಲ್ಲಿ ಮಂಜುನಾಥ್ ಎಂಬುವವರು ನೀಡಿದ್ದ ದೂರಿನ ಆಧಾರದ ಮೇಲೆ ಲಾಯರ್ ಜಗದೀಶ್ ವಿರುದ್ಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಭಾರತೀಯ ದಂಡ ಸಂಹಿತೆಯ (BNS) ಸೆಕ್ಷನ್ 196 (ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಕೃತ್ಯ) ಮತ್ತು ಸೆಕ್ಷನ್ 299 (ಜಾತಿ ಆಧಾರಿತ ನಿಂದನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಗುರುವಾರ ನೋಟಿಸ್ ನೀಡಲು ಜಗದೀಶ್ರ ಮನೆಗೆ ಪೊಲೀಸರು ಹೋದಾಗ ದೊಡ್ಡ ಹೈಡ್ರಾಮವೇ ನಡೆದಿತ್ತು. ಬಾಗಿಲು ತೆಗೆಯದೆ ನೊಟೀಸ್ ಪಡೆದುಕೊಳ್ಳಲು ನಿರಾಕರಿಸಿದ್ದರು. ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಪೊಲೀಸರು ಇಂದು ಜಗದೀಶ್ ಅವರನ್ನು ಬಂಧಿಸಿದ್ದು, ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
ಬಂಧನಕ್ಕೂ ಫೇಸ್ ಮೂಲಕ ವಿಡಿಯೋದಲ್ಲಿ ಪ್ರತಿಕ್ರಿಯೆ ನೀಡಿರುವ ಜಗದೀಶ್, ‘ಯಾರೂ ಅಶಾಂತಿ ಮಾಡಬೇಡಿ. ಇದು ಸಾಮಾನ್ಯ ಪ್ರಕ್ರಿಯೆ’ ಎಂದು ಹೇಳಿದ್ದಾರೆ. ನಾನು ಧರ್ಮಸ್ಥಳದ ವಿರುದ್ಧ ಸತ್ಯವನ್ನು ಹೇಳಿದ್ದೇ ತಪ್ಪೇ ಸಮಾಜದಲ್ಲಿ ತಪ್ಪು ನಡೆದಾಗ ಧ್ವನಿ ಎತ್ತುವುದು ನಮ್ಮ ಸಂವಿಧಾನಿಕ ಹಕ್ಕು. ನ್ಯಾಯಕ್ಕಾಗಿ ಹೋರಾಡುವುದು ಅಪರಾಧವಲ್ಲ ಎಂದಿದ್ದಾರೆ.
ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನಾನು ಸಾಕಿದ ನಾಯಿಗಳಿಗೆ ವಿಷ ಹಾಕಿ ಕೊಂದಿದ್ದಾರೆ. ಇದು ಕೇವಲ ಪ್ರಾಣಿಗಳ ಮೇಲೆ ನಡೆದ ದೌರ್ಜನ್ಯವಲ್ಲ. ನನ್ನ ಕುಟುಂಬದ ಮೇಲಿನ ಕ್ರೂರ ದಾಳಿ ಎಂದು ಪೋಸ್ಟ್ ಮಾಡಿದ್ದಾರೆ.
ಜಗದೀಶ್ ವಿರುದ್ಧ ಇತ್ತೀಚೆಗೆ ವಿಧಾನಸಭೆಯಲ್ಲಿ ಹಕ್ಕು ಚ್ಯುತಿ ಮಂಡಿಸಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈಯುಕ್ತಿಕವಾಗಿ ನಿಂದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಯಲಹಂಕ ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ ಅವರು ಜಗದೀಶ್ ವಿರುದ್ಧ ಹಕ್ಕು ಚ್ಯುತಿ ಮಂಡಿಸಿ ಕ್ರಮಕ್ಕೆ ಆಗ್ರಹಿಸಿದ್ದರು.