ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದ್ದು ಇದರ ಮಧ್ಯೆ MBBS ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ ಕೂಡ ದೊಡ್ಡ ಸದ್ದು ಮಾಡಿತ್ತು. ಇನ್ನು ಪ್ರಕರಣವನ್ನು ಎಸ್ಐಟಿಗೆ ವಹಿಸುತ್ತಿದ್ದಂತೆ ದೂರು ನೀಡಿದ್ದ ಸುಜಾತಾ ಭಟ್ ಇದೀಗ ವರಸೆ ಬದಲಾಯಿಸಿದ್ದಾರೆ. ಅನನ್ಯಾ ಭಟ್ ಕುರಿತಂತೆ ದಾಖಲೆಗಳನ್ನು ತೋರಿಸುವಂತೆ ಒತ್ತಡ ತೀವ್ರವಾಗಿದ್ದರಿಂದ ದಿಢೀರ್ ಅಂತ ಮಹಿಳೆಯೊಬ್ಬರ ಫೋಟೋವನ್ನು ಸುಜಾತಾ ಭಟ್ ತೋರಿಸಿದ್ದರು.
ಈ ಫೋಟೋದಲ್ಲಿರುವುದು ಅನನ್ಯಾ ಭಟ್ ಅಲ್ಲ. ಬದಲಿಗೆ ವಾಸಂತಿ ಎಂಬ ಆರೋಪಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಸುಜಾತಾ ಭಟ್ ಆರೋಪದ ಬಗ್ಗೆ ಅನುಮಾನಗಳು ಮೂಡಿದ್ದವು. ಇನ್ನು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅನನ್ಯಾ ಭಟ್ ನಾಪತ್ತೆ ಪ್ರಕರಣವನ್ನು ಎಸ್ಐಟಿಗೆ ರವಾನಿಸಲಾಗಿತ್ತು. ಹೀಗಾಗಿ ಎಸ್ಐಟಿ ಅಧಿಕಾರಿಗಳು ಪ್ರಕರಣದ ವಿವರ ನೀಡುವಂತೆ ಸುಜಾತಾ ಭಟ್ಗೆ ನೋಟಿಸ್ ನೀಡಿದೆ. ಆದರೆ ಎಸ್ಐಟಿ ನೋಟಿಸ್ಗೆ ಉತ್ತರಿಸದ ಸುಜಾತಾ ಭಟ್, ಆಡಿಯೋವೊಂದನ್ನು ಹರಿಬಿಟ್ಟು ಕೇಸ್ ವಾಪಾಸ್ ಪಡೆಯುವುದಾಗಿ ಹೇಳಿದ್ದಾರೆ.
2003ರಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಅನನ್ಯಾ ಭಟ್ ಕಾಣೆಯಾಗಿದ್ದಾಳೆ ಎಂದು ಆರೋಪಿಸಿ ಸುಜಾತಾ ಭಟ್ ಇದೇ ಜುಲೈ 15ಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಮಿಸಿದ ದೂರು ದಾಖಲಿಸಿದ್ದರು. ನನ್ನ ಮಗಳು ಬದುಕಿದ್ದಾಳೆ ಇಲ್ಲವೋ ಗೊತ್ತಿಲ್ಲ. ಸತ್ತಿದ್ದರೆ ಆಕೆಯ ಕಳೇಬರವನ್ನಾದರೂ ಹುಡುಕಿಕೊಡಿ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡುವುದಾಗಿ ಹೇಳಿದ್ದರು.