ಮಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿಕೊಂಡು ಬಂದಿದ್ದ ದೂರದಾರನನ್ನೇ ಇದೀಗ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದು ಆತನ ಅಸಲಿ ಮುಖ ಬಹಿರಂಗಗೊಂಡಿದೆ. ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಬಂಧಿಸಿರುವ ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಇದರ ಬೆನ್ನಲ್ಲೇ ಮಾಸ್ಕ್ ಮ್ಯಾನ್ ಆರೋಪಗಳನ್ನು ಬೆಂಬಲಿಸುತ್ತಾ ಬಂದಿದ್ದ ಹೋರಾಟಗಾರರು ಇದೀಗ ಒಬ್ಬೊಬ್ಬರಾಗಿ ನುಣುಚಿಕೊಳ್ಳುತ್ತಿದ್ದಾರೆ. ಹೌದು... ಮೊದಲಿಗೆ ಸೌಜನ್ಯ ಪ್ರಕರಣದ ಹೋರಾಟದಲ್ಲಿ ನಿರತರಾಗಿದ್ದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ನಂತರ ಬಂದ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ ಮಾಸ್ಕ್ ಮ್ಯಾನ್ ಆರೋಪಗಳನ್ನು ಪರೋಕ್ಷವಾಗಿ ಬೆಂಬಲಿಸಿದ್ದರು. ಅಲ್ಲದೆ ಪ್ರಕರಣ ಯಾವುದೇ ಕಾರಣಕ್ಕೂ ತಣ್ಣಗಾದಂತೆ ನೋಡಿಕೊಳ್ಳುತ್ತಿದ್ದರು. ಆದರೆ ಮಾಸ್ಕ್ ಮ್ಯಾನ್ ತೋರಿಸಿದ 17 ಜಾಗಗಳಲ್ಲೂ ಆತನೂ ಹೇಳಿದಂತೆ ಯಾವುದೇ ಶವಗಳನ್ನು ಪತ್ತೆಯಾಗದ ಹಿನ್ನೆಲೆಯಲ್ಲಿ ಆತನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಇನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಮಹೇಶ್ ತಿಮರೋಡಿ ಬಂಧನಕ್ಕೆ ಪೊಲೀಸರು ತೆರಳಿದ್ದಾಗ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಬ್ರಹ್ಮಾವರ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೀಡಿದ ದೂರಿನ ಮೇರೆಗೆ ಕೇಸ್ ದಾಖಲಾಗಿದ್ದು ಗಿರೀಶ್ ಮಟ್ಟಣ್ಣವರ್ ಸೇರಿ ಮೂವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಇನ್ನು ತಮ್ಮ ಹೋರಾಟ ಹಾದಿತಪ್ಪುತ್ತಿದ್ದಂತೆ ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಹೋರಾಟಗಾರರು ಇದೀಗ ಒಬ್ಬೊಬ್ಬರಾಗಿ ನುಣುಚಿಕೊಳ್ಳುತ್ತಿದ್ದಾರೆ. ಎಸ್ಐಟಿ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಬಂಧಿಸಿರುವುದು ಗಿರೀಶ್ ಮಟ್ಟಣ್ಣವರ್ ಸ್ವಾಗತಿಸಿದ್ದಾರೆ. ಅಲ್ಲದೆ ಆತನ ಮಂಪರು ಪರೀಕ್ಷೆ ಮಾಡಲಿ ಎಂದು ಸಲಹೆಯನ್ನು ಸಹ ನೀಡಿದ್ದಾರೆ. ಅಲ್ಲದೆ ಈ ಪ್ರಕರಣ ಸಂಬಂಧ ಎಸ್ಐಟಿ ವಿಚಾರಣೆಗೆ ಕರೆದರೆ ಭಾಗಿಯಾಗುವುದಾಗಿ ಹೇಳಿದ್ದಾರೆ. ಮತ್ತೊಂದೆಡೆ ಧರ್ಮಸ್ಥಳ ವಿಚಾರವಾಗಿ ತಪ್ಪು ಮಾಹಿತಿಗಳನ್ನು ಹರಡಿದ ಆರೋಪದ ಮೇಲೆ ಯೂಟ್ಯೂಬರ್ ಧೂತ ಸಮೀರ್ ಎಂಡಿಗೂ ಸಂಕಷ್ಟ ಶುರುವಾಗಿದೆ. ಆತನ ಬಂಧನಕ್ಕೆ ಪೊಲೀಸರು ಬೆಂಗಳೂರಿನಲ್ಲಿ ಹುಡುಕಾಟ ನಡೆಸಿದ್ದಾರೆ. ಇನ್ನು ಬಂಧನ ಭೀತಿಯಲ್ಲಿರುವ ಸಮೀರ್ ತಲೆಮರೆಸಿಕೊಂಡಿದ್ದಾರೆ.