ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಹೇಳಿಕೊಂಡು ಬಂದಿದ್ದ ಅನಾಮಿಕ ದೂರುದಾರ ನೀಡಿದ ಹೇಳಿಕೆಗಳು ಮತ್ತು ಒದಗಿಸಿದ ದಾಖಲೆಗಳಲ್ಲಿ ವ್ಯತ್ಯಾಸಗಳು ಕಂಡು ಬಂದ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ತಲೆಬುರುಡೆ ತಂದಿದ್ದ ಮಾಸ್ಕ್ ಮ್ಯಾನ್ ನನ್ನೇ ಬಂಧಿಸಿದ್ದಾರೆ. ಈಗ ಮಾಸ್ಕ್ ಮ್ಯಾನ್ ಮಂಡ್ಯದ ಚಿಕ್ಕಬಳ್ಳಿ ಗ್ರಾಮದ ಸಿಎನ್ ಚಿನ್ನಯ್ಯ ಎಂಬುದು ಬಹಿರಂಗಗೊಂಡಿದೆ. ಧರ್ಮಸ್ಥಳದಲ್ಲಿ ನೈರ್ಮಲ್ಯ ಕೆಲಸ ಮಾಡಿಕೊಂಡಿದ್ದ ಚಿನ್ನಯ್ಯ, ತಲೆಬುರುಡು ತಂದು ನಾನು ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ರಹಸ್ಯವಾಗಿ ಹೂತಿದ್ದೇನೆ ಎಂದು ನ್ಯಾಯಾಲಯದಲ್ಲಿ 164 ಹೇಳಿಕೆ ಕೊಟ್ಟಿದ್ದನು. ಸದ್ಯ ಚಿನ್ನಯ್ಯನನ್ನು ಬಂಧಿಸಿದ್ದ ಎಸ್ಐಟಿ ಅಧಿಕಾರಿಗಳು ಇಂದು ವೈದ್ಯಕೀಯ ಪರೀಕ್ಷೆ ನಂತರ ಬೆಳ್ತಂಗಡಿಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಕೋರ್ಟ್ ಚಿನ್ನಯ್ಯನನ್ನು 10 ದಿನ ಎಸ್ಐಟಿ ಕಸ್ಟಡಿಗೆ ನೀಡಿದೆ. ಚಿನ್ನಯ್ಯ ಬಂಧನವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು, ಸತ್ಯಗಳು ಹೀಗೆ ಒಂದೊಂದಾಗಿ ಹೊರಬರುತ್ತಿದೆ. ಇದು ಕ್ಷೇತ್ರದ ವಿರುದ್ಧ ಪಿತೂರಿಯ ಭಾಗವಾಗಿದೆ ಎಂದರು.
ಧರ್ಮಸ್ಥಳ ಪ್ರಕರಣದಲ್ಲಿ ಮುಸುಕುಧಾರಿ ವ್ಯಕ್ತಿ ಚಿನ್ನಯ್ಯನನ್ನು ಬಂಧಿಸಲಾಗಿದೆ. ಸತ್ಯವನ್ನು ಹೊರತರುವುದಕ್ಕಾಗಿಯೇ ನಮ್ಮ ಸರ್ಕಾರ ಎಸ್‌ಐಟಿ ರಚಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂತಿದ್ದೇನೆ ಎಂದಿದ್ದ ವ್ಯಕ್ತಿಯನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಎಸ್‌ಐಟಿಯ ತನಿಖೆ ಸಂಪೂರ್ಣ ಆಗುವವರೆಗೂ ಯಾವ ಮಾಹಿತಿಯೂ ನೀಡುವುದಕ್ಕೆ ಸಾಧ್ಯವಿಲ್ಲ. ಜೊತೆಗೆ ಅದರ ಬಗ್ಗೆ ಯಾವ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು. ಮತ್ತೊಂದೆಡೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ನಾವು ಯಾರ ಪರವೂ ಇಲ್ಲ, ನ್ಯಾಯದ ಪರವಷ್ಟೇ. ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ ಎಂದರು. ಧರ್ಮಸ್ಥಳದ ವಿಚಾರದಲ್ಲಿ ಯಾರ್ಯಾರ ತಪ್ಪಿದೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಆ ಕೆಲಸ ನಾವು ಮಾಡುತ್ತಿದ್ದೇವೆ ಎಂದರು.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿಕೊಂಡು ಬಂದಿದ್ದ ದೂರದಾರನ ಆರೋಪಗಳಿಗೆ ಪರೋಕ್ಷವಾಗಿ ಬೆಂಬಲಿಸಿದ್ದ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಇದೀಗ ಚಿನ್ನಯ್ಯನ ಬಂಧನವನ್ನು ಸ್ವಾಗತಿಸಿದ್ದಾರೆ. ಅಲ್ಲದೆ ಆತನ ಮಂಪರು ಪರೀಕ್ಷೆ ನಡೆಸುವಂತೆ ಸಲಹೆ ನೀಡಿದ್ದಾರೆ. ಇನ್ನು 2003ರ ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೂ ಟ್ವಿಸ್ಟ್ ಸಿಕ್ಕಿದ್ದು ದೂರುದಾರ ಸುಜಾತ ಭಟ್ ಉಲ್ಟಾ ಹೊಡೆದಿದ್ದಾರೆ. ಅನನ್ಯಾ ಭಟ್ ಕಥೆ ಸುಳ್ಳು, ಅನನ್ಯಾ ಅನ್ನೋ ಮಗಳೇ ನನಗೆ ಇರಲಿಲ್ಲ. ನಾನು ಹೇಳಿದ್ದು ಸುಳ್ಳು. ಗಿರೀಶ್ ಮಟ್ಟಣ್ಣನವರ್, ಜಯಂತ್ ಹೇಳಿಕೊಟ್ಟಂತೆ ನಾನು ಹೇಳಿದ್ದೆ ಎಂದಿದ್ದಾರೆ. ಮತ್ತೊಂದೆಡೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಡಿ ಬಂಧನವಾಗಿದ್ದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಉಡುಪಿ ಕೋರ್ಟ್ ಜಾಮೀನು ನೀಡಿದೆ.
ಅಕ್ರಮವಾಗಿ ಬೆಟ್ಟಿಂಗ್ ಕಂಪನಿ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರನ್ನು ಸಿಕ್ಕಿಂನಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದೆ. ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ವೀರೇಂದ್ರ ಪಪ್ಪಿ ಮನೆಯಲ್ಲಿ 1 ಕೋಟಿ ವಿದೇಶಿ ಕರೆಸ್ಸಿ ಸೇರಿದಂತೆ 12 ಕೋಟಿ ರೂ. ನಗದು, 6 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಸುಮಾರು 10 ಕೆಜಿ ಬೆಳ್ಳಿ ಮತ್ತು ನಾಲ್ಕು ವಾಹನಗಳನ್ನು ವಶಪಡಿಸಿಕೊಂಡಿದೆ. ವ್ಯವಹಾರ ಸಂಬಂಧ ಸಿಕ್ಕಿಂನ ಗ್ಯಾಂಗ್ಟಕ್ಗೆ ಹೋಗಿದ್ದ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಅವರನ್ನು ಸಿಕ್ಕಿಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಟ್ರಾನ್ಸಿಟ್ ವಾರೆಂಟ್ ಮೇಲೆ ಇಂದು ರಾತ್ರಿ ಬೆಂಗಳೂರಿಗೆ ಇಡಿ ಅಧಿಕಾರಿಗಳು ಕರೆತರಲಿದ್ದಾರೆ.
2025-26ನೇ ಸಾಲಿಗೆ 147 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಾಗಿ ಮೇಲ್ದರ್ಜೆಗೇರಿಸಲು ಶಾಲಾ ಶಿಕ್ಷಣ ಇಲಾಖೆ ಅನುಮೋದನೆ ನೀಡಿದೆ. ಇದರಲ್ಲಿ ಸಿಎಸ್‌ಆರ್ ಬೆಂಬಲ ಹೊಂದಿರುವ 65 ಶಾಲೆಗಳು, ರಾಜ್ಯ ಬಜೆಟ್ ಘೋಷಣೆಯಡಿಯಲ್ಲಿ 76 ಮತ್ತು ಸಮಗ್ರ ಶಿಕ್ಷಾ ಕರ್ನಾಟಕದ ಅಡಿಯಲ್ಲಿ ಅನುಮೋದಿಸಲಾದ 6 ಶಾಲೆಗಳು ಸೇರಿವೆ. ಈ ವರ್ಷ 9 ನೇ ತರಗತಿ ಲಭ್ಯವಿರುವ ಶಾಲಾ ಕೊಠಡಿಗಳಲ್ಲಿ ಪ್ರಾರಂಭವಾಗಲಿದ್ದು, ತಾತ್ಕಾಲಿಕ ಶಿಕ್ಷಕರನ್ನು ನಿಯೋಜಿಸಿ ಹುದ್ದೆಗಳನ್ನು ತರ್ಕಬದ್ಧಗೊಳಿಸಲಾಗುತ್ತದೆ. ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದ ಈ ಕ್ರಮವು ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಮಾಧ್ಯಮಿಕ ಶಿಕ್ಷಣದ ಪ್ರವೇಶವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.