ಬೆಂಗಳೂರು: ಧರ್ಮಸ್ಥಳ ಪ್ರಕರಣ ಹಿಂದೂ ಧಾರ್ಮಿಕ ನಂಬಿಕೆಯ ಮೇಲೆ ನಡೆದ ಪ್ರಾಯೋಜಿತ ದಾಳಿ ಎಂಬುದು ಈಗ ಬಹಿರಂಗಗೊಂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾನುವಾರ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಸಚಿವರು, ಕಾಂಗ್ರೆಸ್ ಸರ್ಕಾರ ಹಿಂದೂ ಧಾರ್ಮಿಕತೆಯ ಮೇಲೆ ದಾಳಿ ನಡೆಸಿ, ಪುರಾತನವಾದ, ಪ್ರಸಿದ್ಧ ಹಿಂದೂ ದೇವಾಲಯದ ವಿರುದ್ಧ ಇಲ್ಲ-ಸಲ್ಲದ ಷಡ್ಯಂತ್ರದ ಟೂಲ್‌ಕಿಟ್ ಬಳಸಿಕೊಂಡಿತು ಎಂದು ಆರೋಪಿಸಿದ್ದಾರೆ.
ಆತುರದಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಹಿನ್ನೆಲೆ ಪರಿಶೀಲನೆ ಮಾಡದೇ, ಏಕಾಏಕಿ ದೊಂಬರಾಟಕ್ಕೆ ದಾರಿ ಮಾಡಿಕೊಟ್ಟಿದ್ದು ಐತಿಹಾಸಿಕ ದುರಂತ ಎಂದಿದ್ದಾರೆ.
ಮುಖವಾಡ ಧರಿಸಿದ ವ್ಯಕ್ತಿಯಿಂದ ಹಿಡಿದು ಪ್ರಾಯೋಜಿತ ಯೂಟ್ಯೂಬರ್‌ಗಳವರೆಗೆ, ಯಾವುದೇ ಸತ್ಯಾಸತ್ಯತೆಗಳನ್ನು ಪರಿಶೀಲಿಸದೇ, ಧರ್ಮಸ್ಥಳದ ಪವಿತ್ರ್ಯವನ್ನು ಹಾಳುಗೆಡವಿ, 15 ದಿನಗಳ ಕಾಲ ಮಾಧ್ಯಮಗಳಿಗೆ ಸರ್ಕಸ್ ಆಗಿ ಬಿಂಬಿಸಲಾಗಿದೆ. ಧಾರ್ಮಿಕ ನಂಬಿಕೆ ಎಂದೆಂದಿಗೂ ವೈಯಕ್ತಿಕ, ಆದರೆ, ಆಡಳಿತದಲ್ಲಿ ಸಮತೋಲನ ಪ್ರಾಮುಖ್ಯ ವಹಿಸುತ್ತದೆ. ಅಸ್ಪಷ್ಟತೆಯ ಕಾಂಗ್ರೆಸ್ ಸರ್ಕಾರದಿಂದಲೇ ಇಷ್ಟು ರಾದ್ದಾಂತ ಸೃಷ್ಟಿಯಾಗಿದೆ ಎಂದು ಆರೋಪಿಸಿದ್ದಾರೆ.
ಹೆಸರು ಹಾಳು ಮಾಡಿದ ಬಳಿಕ, ಆರೋಪಿಗಳನ್ನು ಬಂಧಿಸುವ ನಾಟಕ. ಇದು ಕ್ಷಮಿಸಲಾರದಂತಹ ದೊಡ್ಡ ತಪ್ಪಾಗಿದೆ. ಅಸಂಖ್ಯಾತ ಭಕ್ತರ ಧಾರ್ಮಿಕತೆಗೆ ನೋವುಂಟಾಗಿದೆ ಎಂದು ಹೇಳಿದ್ದು, ರಾಜ್ಯ ಸರ್ಕಾರದಿಂದ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಬಯಸಿದ್ದಾರೆ.
ಕಾಣದ ಕೈಗಳಿಂದ ಉದ್ದೇಶಪೂರ್ವಕ ಪ್ರಯತ್ನ ನಡೆದಿದೆಯಾ? ಇದು ಯಾರ ಆಜ್ಞೆಯ ಮೇರೆಗೆ ಇಂತಹ ದುಸಾಹಸಕ್ಕೆ ಕೈಹಾಕಲಾಯಿತು? ಸತ್ಯಾಸತ್ಯಗಳು ಇದ್ದರೂ, ಕಾಂಗ್ರೆಸ್ ಸರ್ಕಾರ ಏಕೆ ಮೌನವಹಿಸಿದೆ? ಇದರ ಹಿಂದಿನ ಷಡ್ಯಂತ್ರದ ರೂವಾರಿ ಹಾಗೂ ಹಣಕಾಸಿನ ವ್ಯವಹಾರದ ಮೂಲಕ್ಕೆ ತಕ್ಕ ಶಾಸ್ತಿ ಯಾವಾಗ? ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು ಮತ್ತು ಹೊಣೆಗಾರಿಕೆಯನ್ನು ಹೊರಬೇಕು ಎಂದು ಆಗ್ರಹಿಸಿದ್ದಾರೆ.