ಬೆಳಗಾವಿ: ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ಇನ್ನೂ ಮರೀಚಿಕೆಯಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಆ್ಯಂಬುಲೆನ್ಸ್ ಗಾಗಿ ಬಾಣಂತಿ ಹಾಗೂ ನವಜಾತಿ ಶಿಶು ಹೊತ್ತ ಪತಿಯೊಬ್ಬ 1.5 ಕಿ.ಮೀ ಸಾಗಿದ ಘಟನೆಯೊಂದು ಬೆಳಗಾವಿ ಜಿಲ್ಲೆಯ ಅಡಹಳ್ಳಟ್ಟಿ ಗ್ರಾಮದಲ್ಲಿ ನಡೆದಿದೆ.
ಭೀಮಶಂಕರ್ ನಾಯಕ್ ಅವರ ಪತ್ನಿ ಶಿಲ್ಪಾ ಅವರಿಗೆ ಶುಕ್ರವಾರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕುಟುಂಬವು ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡುತ್ತಿರುವ ನಡುವಲ್ಲೇ ಆಕೆ ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಮಗು ಹಾಗೂ ತಾಯಿನ್ನು ಆಸ್ಪತ್ರೆಗೆ ಸಾಗಿಸಲು ಕುಟುಂಬ 108 ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿದೆ.
ಆದರೆ, ಆಂಬ್ಯುಲೆನ್ಸ್ ಚಾಲಕ ರಸ್ತೆ ಸಂಪೂರ್ಣವಾಗಿ ಹಾಳಾಗಿರುವುದರಿಂದ ಮನೆ ಬಳಿ ವಾಹನ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಬಳಿಕ ಶಿಲ್ಪಾ ಅವರ ಪತಿ, ಪತ್ನಿ ಹಾಗೂ ನವಜಾತ ಶಿಶುವನ್ನು ಎತ್ತಿಕೊಂಡು 1.5 ಕಿಮೀ ನಡೆದು ಸಾಗಿದ್ದಾರೆ.
ತಾಯಿ ಹಾಗೂ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಇಬ್ಬರೂ ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ.
ಘಟನೆ ಬೆನ್ನಲ್ಲೇ ಗ್ರಾಮಸ್ಥರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮೂಲಸೌಕರ್ಯ ಒದಗಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಸ್ತೆ ದುರಸ್ತಿ ಕಾರ್ಯಕ್ಕೆ ಹಣ ಮಂಜೂರು ಮಾಡಿದ್ದರೂ, ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.