ಬೆಂಗಳೂರು: ಕಸದ ರಾಶಿಯಲ್ಲಿ ಮನುಷ್ಯನ ಮೂಳೆಗಳು ಪತ್ತೆಯಾಗಿ ಕೆಲ ಹೊತ್ತು ಆಂತಕ ಸೃಷ್ಟಿಸಿದ್ದ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಗೋವಿಂದ ಶೆಟ್ಟಿ ಪಾಳ್ಯ ರಸ್ತೆಯಲ್ಲಿ ಮಂಗಳವಾರ ನಡೆದಿದೆ.
ಗೋವಿಂದಶೆಟ್ಟಿಪಾಳ್ಯದ ಗಣೇಶದೇವಾಲಯದ ಹತ್ತಿರದ ಕಸದ ರಾಶಿಯಲ್ಲಿ ತಲೆ ಬುರುಡೆ ಹಾಗೂ ಮೂಳೆಗಳು ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಆತಲೆಬರುಡೆ ಹಾಗೂ ಮೂಳೆಗಳ ಮೂಲ ಪತ್ತೆ ಹಚ್ಚಿದ ಬಳಿಕ ಆಂತಕ ಕೊನೆಯಾಗಿದೆ.
ಸ್ಥಳೀಯ ನಿವಾಸಿಯೊಬ್ಬರ ಪುತ್ರಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದು, ಅಧ್ಯಯನ ಸಲುವಾಗಿ ತಲೆಬರುಡೆ ಹಾಗೂ ಮೂಳೆಗಳನ್ನು ತಂದು ಆಕೆ ಮನೆಯಲ್ಲಿಟ್ಟಿದ್ದಳು.
ಆದರೆ, ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮನೆ ಸ್ವಚ್ಛಗೊಳಿಸುವಾಗ ಪೋಷಕರು, ಆ ಮೂಳೆಗಳು ನಿರುಪಯುಕ್ತವೆಂದು ಭಾವಿಸಿ ಕಸಕ್ಕೆ ಎಸೆದಿದ್ದರು.
ಈ ನಡುವೆ ಸ್ಥಳದಲ್ಲಿ ಮೂಳೆಗಳ ಕುರಿತು ಆತಂಕ ಸೃಷ್ಟಿಯಾದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾಗ ಸ್ಥಳಕ್ಕೆ ಬಂದ ವಿದ್ಯಾರ್ಥಿನಿಯ ತಂದೆ, ತಾವೇ ಅಸ್ಥಿಪಂಜರವನ್ನು ಎಸೆದಿರುವುದಾಗಿ ತಿಳಿಸಿದ್ದಾರೆ. ಪರಿಶೀಲನೆ ಬಳಿಕ ಪೊಲೀಸರು ಹೇಳಿಕೆಯನ್ನು ದಾಖಲಿಸಿ, ಎಚ್ಚರಿಕೆ ನೀಡಿದ್ದಾರೆಂದು ತಿಳಿದುಬಂದಿದೆ.