ಕಲಬುರಗಿ: ಆಳಂದಕ್ಕೆ ಬನ್ನಿ ಮತಗಳ್ಳತನ ಸಾಬೀತು ಪಡಿಸುತ್ತೇನೆಂದು 'ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ರಾಹುಲ್ ಗಾಂಧಿಗೆ ಪತ್ರ ಬರೆದಿರುವ ನ್ಯಾ. ಎಸ್.ಎನ್.ಧಿಂಗ್ರಾ, ನಿರ್ಮಲ್ ಕೌರ್ ಸೇರಿದಂತೆ 272 ಬುದ್ಧಿಜೀವಿಗಳಿಗೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ, ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರು ಸೋಮವಾರ ಸವಾಲು ಹಾಕಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮತಗಳ್ಳತನ ಆರೋಪದ ಬಗ್ಗೆ ಪತ್ರ ಬರೆದಿರುವ ಬುದ್ಧಿಜೀವಿಗಳು, ನಿವೃತ್ತ ನ್ಯಾಯಾಧೀಶರು ನಮ್ಮ ತಾಲ್ಲೂಕಿನ ಸ್ಥಳಗಳಿಗೆ ಭೇಟಿ ನೀಡಲಿ, ಹೇಗೆ ಮತಗಳ್ಳತನ ಆಗಿದೆ, ಮತಗಳ್ಳತನಕ್ಕೆ ಮಾಡಿರುವ ತಂತ್ರಗಳೆಲ್ಲವೂ ಖುದ್ದಾಗಿ ತಿಳಿದುಕೊಳ್ಳಲಿ, ಇದಕ್ಕೆ ಬೇಕಾಗುವ ಎಲ್ಲಾ ರೀತಿಯ ಖರ್ಚು ವೆಚ್ಚಗಳನ್ನು ಭರಿಸಲು ನಾನು ಸಿದ್ಧನಿದ್ದೇನೆಂದು ಸವಾಲು ಹಾಕಿದರು.
ನಾನು ಆಳಂದ ಕ್ಷೇತ್ರದ ಚುನಾಯಿತ ಪ್ರತಿನಿಧಿ. ನನ್ನ ವಿರುದ್ಧ ಮತಗಳ್ಳತನ ಯತ್ನ ನಡೆಸಲಾಗಿದೆ. ಅನುಮಾನದ ಮೇರೆಗೆ ಪರಿಶೀಲಿನೆ ನಡೆಸಲಾಗಿತ್ತು. ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರವೇ ಆರೋಪ ಮಾಡಲಾಗಿದೆ. ಪತ್ರದಲ್ಲಿ ಸಹಿ ಮಾಡಿದವರು ಕ್ಷೇತ್ರಕ್ಕೆ ಭೇಟಿ ನೀಡಿ, ಮತ ಹಕ್ಕು ಕಳೆದುಕೊಂಡ ಜನರನ್ನು ಎದುರಿಸಲಿ. ಸಾಕ್ಷಿಗಳನ್ನು ಕಣ್ಣುಗಳಿಂದ ನೋಡಿದ ಬಳಿಕ ಮತದಾರರನ್ನು ರಕ್ಷಿಸುವ ಬದಲು ವಂಚಕ ವ್ಯವಸ್ಥೆಯನ್ನೇಗೆ ಸಮರ್ಥಿಸಿಕೊಂಡಿರಿ ಎಂಬುದಕ್ಕೆ ಉತ್ತರ ನೀಡಿ ಎಂದು ಹೇಳಿದರು.
ನೀವು ಚುನಾವಣಾ ಆಯೋಗದ ಮೇಲಿನ ನಂಬಿಕೆಯ ಬಗ್ಗೆ ಮಾತನಾಡುತ್ತೀರಿ. ಆದರೆ, ಇಸಿಐ ತನ್ನ ವ್ಯವಸ್ಥೆಗಳನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸಾಕ್ಷ್ಯಗಳನ್ನು ಹಂಚಿಕೊಂಡಿದ್ದರು ಇಸಿಐ ಕರ್ನಾಟಕ ಸಿಐಡಿಯನ್ನು ಎಫ್‌ಐಆರ್ ದಾಖಲಿಸಿ, ತನಿಖೆ ಮಾಡುವುದನ್ನು ತಡೆದಿದೆ. ರಾಹುಲ್ ಗಾಂಧಿ ಜನರ ಹೃದಯ ಮತ್ತು ಮನಸ್ಸಿನಲ್ಲಿ ಇಸಿಐ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಲಿಲ್ಲ. ಜನರ ಮನಸ್ಸಿನಲ್ಲಿ ಈಗಾಗಲೇ ಆ ಅನುಮಾನವಿದೆ. ರಾಹುಲ್ ವಂಚನೆಯನ್ನು ಬಹಿರಂಗಪಡಿಸಿದ್ದಾರಷ್ಟೇ. ವ್ಯವಸ್ಥೆಯನ್ನು ರಕ್ಷಿಸುವ ಕರ್ತವ್ಯವನ್ನು ಹೊಂದಿರುವ ಸಂಸ್ಥೆಗಳು ಸತ್ಯಕ್ಕೆ ಬಾಗಿಲು ಮುಚ್ಚಿವೆ. ಅದನ್ನು ಜನರು ಸ್ಪಷ್ಟವಾಗಿ ನೋಡಬಹುದಾಗಿದೆ.
ನಿಮ್ಮ ಪತ್ರವು ನಿಜವಾಗಿಯೂ ಸ್ವತಂತ್ರ ಮತ್ತು ಪ್ರಾಮಾಣಿಕವಾಗಿದ್ದರೆ, ಆಳಂದ ಕ್ಷೇತ್ರಕ್ಕೆ ಭೇಟಿ ನೀಡಿ, ವಂಚನೆಯನ್ನು ಪ್ರತ್ಯಕ್ಷವಾಗಿ ನೋಡಿ. ಇಲ್ಲದಿದ್ದರೆ, ನಿಮ್ಮ ಪತ್ರವು ಪಕ್ಷಪಾತ ಮತ್ತು ವಾಸ್ತವದಿಂದ ದೂರವಿದೆ ಎಂಬುದನ್ನು ಬಹಿರಂಗಪಡಿಸುತ್ತದೆ ಎಂದು ತಿಳಿಸಿದ್ದಾರೆ.