ಚಿಕ್ಕಮಗಳೂರು: ಶಬರಿಮಲೆ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಕಾಲೇಜಿಗೆ ಬಂದ ಮೂವರು ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು ಹೊರಗೆ ಕಳುಹಿಸಿದ ಘಟನೆ ಚಿಕ್ಕಮಗಳೂರು ನಗರದ ಪ್ರತಿಷ್ಠಿತ ಎಂ.ಇ.ಎಸ್. ಪಿಯುಕಾಲೇಜಿನಲ್ಲಿ ನಡೆದಿದೆ.
ಕಾಲೇಜಿನಲ್ಲಿ ಮೊದಲ ವರ್ಷದ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಕ್ಲಾಸ್ನಿಂದಲೇ ಹೊರಗೆ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಘಟನೆಗೆ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಸಮವಸ್ತ್ರ ನೀತಿ ಉಲ್ಲಂಘನೆ ಎಂದ ಪ್ರಿನ್ಸಿಪಾಲ್
ಕೆಲ ಹಿಂದೂ ಸಂಘಟನೆ ಮುಖಂಡರು ಕಾಲೇಜಿಗೆ ಭೇಟಿ ನೀಡಿದ್ದು, ಅಯ್ಯಪ್ಪ ಮಾಲಾಧಾರಿಗಳನ್ನ ಕಾಲೇಜಿನಿಂದ ಹೊರ ಹಾಕಿದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಾವು ಸರ್ಕಾರ ಹಾಗೂ ಕಾಲೇಜು ಆಡಳಿತ ಮಂಡಳಿಯ ಆದೇಶ ಪಾಲಿಸಿದ್ದೇವೆ. ನಮ್ಮಲ್ಲಿ ಸಮವಸ್ತ್ರ ಬಿಟ್ಟು ಬೇರೆ ಯಾವುದೇ ಬಟ್ಟೆ ಧರಿಸುವಂತಿಲ್ಲ. ವಿದ್ಯಾರ್ಥಿಗಳಿಗೆ ನಾವು ತಿಳಿ ಹೇಳಿದ್ದೇವೆ ಅಷ್ಟೇ. ಸದ್ಯಕ್ಕೆ ಮೂವರು ವಿದ್ಯಾರ್ಥಿಗಳನ್ನು ತರಗತಿಗೆ ಕೂರುವಂತೆ ಸೂಚನೆ ನೀಡಿದ್ದು, ಈ ಬಗ್ಗೆ ಆಡಳಿತ ಮಂಡಳಿಯ ಜೊತೆ ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಅಯ್ಯಪ್ಪ ಮಾಲೆ ತೆಗೆದು ಕಾಲೇಜಿಗೆ ಬನ್ನಿ
ಅಯ್ಯಪ್ಪ ಮಾಲೆ ಧರಿಸಿದ್ದಕ್ಕೆ ಕಾಲೇಜಿನಿಂದ ಮೂವರು ವಿದ್ಯಾರ್ಥಿಗಳನ್ನು ಹೊರಗೆ ಕಳಿಸಿದ ಪ್ರಾಂಶುಪಾಲರು, ಅಯ್ಯಪ್ಪ ಮಾಲೆ ತೆಗೆದು ಕಾಲೇಜಿಗೆ ಬರುವಂತೆ ಸೂಚನೆ ನೀಡಿದರು ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಹಿಂದೂ ಸಂಘಟನೆಗಳ ಮುಖಂಡರು ಕಾಲೇಜು ಅಡಳಿತ ಮಂಡಳಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿಗಳು ಹೊರಕ್ಕೆ
ಈ ಹಿಂದೆ ಜನಿವಾರ ಧರಿಸಿ ಪರೀಕ್ಷೆಗೆ ಹಾಜರಾಗಿದ್ದವರಿಗೆ ಪ್ರವೇಶ ನಿರಾಕರಿಸಿದ ವಿಚಾರ ಸುದ್ದಿಯಾಗಿತ್ತು. ಇದೀಗ ಅಯ್ಯಪ್ಪನ ಮಾಲೆ ಧರಿಸಿದವರಿಗೆ ಕಾಲೇಜಿನಿಂದ ಗೇಟ್ಪಾಸ್ ಕೊಟ್ಟಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಕಾಲೇಜು ಆಡಳಿತ ಮಂಡಳಿ ವಿರುದ್ಧ ಪೋಷಕರು ಹಾಗೂ ಬಿಜೆಪಿ ಸ್ಥಳೀಯ ನಾಯಕರು ಆಕ್ರೋಶ ಹೊರಹಾಕಿದ್ದಾರೆ.
ಡಿಸೆಂಬರ್ 2 ರಿಂದ ಪ್ರಾರಂಭವಾಗುವ ಮೂರು ದಿನಗಳ ದತ್ತ ಜಯಂತಿ ಉತ್ಸವಕ್ಕೆ ಚಿಕ್ಕಮಗಳೂರು ಸಜ್ಜಾಗಿದೆ. ಹೀಗಾಗಿ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇದರ ಮಧ್ಯೆ ಶಬರಿಮಲೆ ಅಯ್ಯಪ್ಪ ಮಾಲೆ ವಿಚಾರವಾಗಿ ವಿವಾದವೊಂದು ಬೆಳಕಿಗೆ ಬಂದಿದೆ.