ಬೆಂಗಳೂರು: ಪ್ರಧಾನ ಮಂತ್ರಿ ಇ-ಡ್ರೈವ್ ಯೋಜನೆ ಅಡಿಯಲ್ಲಿ ಬೆಂಗಳೂರಿಗೆ 4,500 ಇ-ಬಸ್‌ಗಳ ಹಂಚಿಕೆ ಮಾಡಲಾಗುತ್ತಿದ್ದು, ಈ ಮೂಲಕ ಬೆಂಗಳೂರು ಸಾರಿಗೆಗೆ ಮತ್ತಷ್ಟು ಬಲ ಬರುತ್ತಿದೆ.
ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ (ಸಿಇಎಸ್ಎಲ್) ಕಳೆದ ತಿಂಗಳು ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ಕೇಂದ್ರ ಭಾರೀ ಕೈಗಾರಿಕೆಗಳ ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮಾ ಅವರು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು, ಬೆಂಗಳೂರಿಗೆ ಮಂಜೂರಾದ ಬಸ್‌ಗಳ ಸಂಖ್ಯೆ, ಹಂಚಿಕೆಯಾದ ಹಣ, ಕಾರ್ಯಾಚರಣೆಯ ಸ್ಥಿತಿ ಮತ್ತು ವಿಳಂಬಕ್ಕೆ ಕಾರಣಗಳನ್ನು ವಿವರಿಸುವಂತೆ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಚಿವ, ಈ ಯೋಜನೆಯಡಿಯಲ್ಲಿ 4,500 ಇ-ಬಸ್‌ಗಳನ್ನು ಬಿಎಂಟಿಸಿಗೆ ನೀಡಲಾಗಿದೆ. ನವೆಂಬರ್ 14 ರಂದು ಸಿಇಎಸ್‌ಎಲ್ ಒಪ್ಪಂದಗಳನ್ನು ಅಂತಿಮಗೊಳಿಸಿದೆ. ಇದರೊಂದಿಗೆ 10,900 ಇ-ಬಸ್‌ಗಳನ್ನು ಹಂಚಿಕೆ ಮಾಡಿದಂತಾಗುತ್ತದೆ. ಈ ಬಸ್‌ಗಳ ಖರೀದಿ ಮತ್ತು ನಿಯೋಜನೆ ಪ್ರಗತಿಯಲ್ಲಿದೆ ಎಂದು ಹೇಳಿದರು.
FAME-II ಯೋಜನೆಯಡಿಯಲ್ಲಿ, ಬಿಎಂಟಿಸಿ 1,221 ಇ-ಬಸ್‌ಗಳು ಮತ್ತು ಕೇಂದ್ರ ನೆರವಿನಂತೆ 517.23 ಕೋಟಿ ರೂ.ಗಳನ್ನು ಪಡೆದುಕೊಂಡಿದೆ. ಎಲ್ಲಾ 1,221 ಬಸ್‌ಗಳನ್ನು ನಿಯೋಜಿಸಲಾಗಿದೆ. ಕರ್ನಾಟಕವು 425 ಬಸ್‌ಗಳನ್ನು ಪಡೆದಿದ್ದರೂ, ಹಿಂದಿನ FAME ಯೋಜನೆಯಡಿಯಲ್ಲಿ ಬೆಂಗಳೂರಿಗೆ ಯಾವುದೇ ಬಸ್‌ಗಳು ಬಂದಿಲ್ಲ.
FAME-II ಯೋಜನೆಯಡಿಯಲ್ಲಿ ರಾಜ್ಯದಲ್ಲಿ 6,862 ಎಲೆಕ್ಟ್ರಿಕ್ ಬಸ್‌ಗಳು ಮತ್ತು PM ಇ-ಡ್ರೈವ್ ಯೋಜನೆಯಡಿಯಲ್ಲಿ 13,800 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ನಿಯೋಜಿಸಲಾಗಿದೆ. ಬೆಂಗಳೂರಿನ ನಾಲ್ಕು ಪ್ರಮುಖ ಕಾರಿಡಾರ್‌ಗಳಲ್ಲಿ ಒಟ್ಟಾರೆಯಾಗಿ 236 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ತೈಲ ಮಾರುಕಟ್ಟೆ ಕಂಪನಿಗಳು (OMCಗಳು) ಈ ಕಾರಿಡಾರ್‌ಗಳಲ್ಲಿ 236 EV ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಿವೆ, ಅವುಗಳಲ್ಲಿ ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ (NH 48) 109, ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ (NH 44) 64, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ (NH 275) 33 ಮತ್ತು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯಲ್ಲಿ 30 ಸೇರಿವೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಬ್ಯಾಟರಿ ವಿನಿಮಯ ಕೇಂದ್ರಗಳ ಕುರಿತು ಯಾವುದೇ ಕೇಂದ್ರೀಕೃತ ಡೇಟಾ ಲಭ್ಯವಿಲ್ಲ. ಎಲೆಕ್ಟ್ರಿಕ್ ಬಸ್‌ಗಳು ಮತ್ತು ಸರಕು ಸಾಗಣೆ ಟ್ರಕ್‌ಗಳಂತಹ ಭಾರೀ ಇವಿ ವಾಹನಗಳಿಗೆ ಪ್ರಸ್ತುತ ಮೂಲಸೌಕರ್ಯವು ಸಮರ್ಪಕವಾಗಿದೆಯೇ ಎಂದು ನಿರ್ಣಯಿಸಲು ಯಾವುದೇ ಅಧ್ಯಯನವನ್ನು ನಡೆಸಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.