ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಅಡಿಯಲ್ಲಿ ಬರುವ ಬೆಂಗಳೂರು ಪೂರ್ವ ಮಹಾನಗರ ಪಾಲಿಕೆ, ಅನುಮೋದಿತ ಯೋಜನೆಯನ್ನು ಉಲ್ಲಂಘಿಸಿ ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳನ್ನು ಮತ್ತು ಅನಧಿಕೃತವಾಗಿ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಿದ ಆಸ್ತಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಿದೆ.
ಜಿಬಿಎ ಅನಧಿಕೃತ ಫ್ಲೋರ್, ಅಕ್ರಮ ಕಟ್ಟಡ ತೆರವಿಗಾಗಿ 11 ಕಟ್ಟಡಗಳನ್ನು ಪಟ್ಟಿ ಮಾಡಿದೆ. ಮಹದೇವಪುರ ವಿಧಾನಸಭಾ ವಿಭಾಗದಲ್ಲಿ ಐದು ಕಟ್ಟಡಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ವೈಟ್‌ಫೀಲ್ಡ್ ವಾರ್ಡ್‌ನಲ್ಲಿರುವ ಒಂದು ಕಟ್ಟಡದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮೇಲಿನ ಮಹಡಿಯನ್ನು ಕೆಡವಲಾಗಿದೆ.
ಅನುಮೋದಿತ ಕಟ್ಟಡ ಯೋಜನೆಗಳನ್ನು ಉಲ್ಲಂಘಿಸಿದ ಅಥವಾ ಅನಧಿಕೃತ ಮಹಡಿಗಳನ್ನು ಸೇರಿಸಿದ ನಿರ್ಮಾಣಗಳ ಕುರಿತು ಜಿಬಿಎ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂಗೀಕರಿಸಿದ ನಿಯಮ 313, 248 (1), (2) ಮತ್ತು 356 ರ ಆಧಾರದ ಮೇಲೆ, ಮಾಹಿತಿ ಕೋರಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಉಲ್ಲಂಘಿಸಿದವರು ತಾವೇ ಅಕ್ರಮ ನಿರ್ಮಾಣವನ್ನು ತೆರವುಗೊಳಿಸುವಂತೆ ಸೂಚಿಸಿದೆ. ನೀವು ತೆರವುಗೊಳಿಸದಿದ್ದರೆ ಜಿಬಿಎ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಸಲಾಗಿದೆ.
ಎರಡು ಕಟ್ಟಡಗಳ ವಿರುದ್ಧ ಕ್ರಮ ಆರಂಭವಾಗಿದೆ ಮತ್ತು ಶೀಘ್ರದಲ್ಲೇ ಉಳಿದ ಕಟ್ಟಡಗಳು ಸಹ ಇದೇ ರೀತಿಯ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಪೂರ್ವ ಮಹಾನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು ತಿಳಿಸಿದ್ದಾರೆ.
ವೈಟ್‌ಫೀಲ್ಡ್, ಹಗದೂರು ಮತ್ತು ಪಟ್ಟಂದೂರು ವಾರ್ಡ್‌ಗಳಲ್ಲಿ ಅಂತಹ ಆಸ್ತಿಗಳನ್ನು ಗುರುತಿಸಲಾಗಿದೆ ಮತ್ತು ಮೂವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಎಂಜಿನಿಯರ್‌ಗಳು ತಿಳಿಸಿದ್ದಾರೆ.
ಶೀಘ್ರದಲ್ಲೇ, ಐದೂ ಮಹಾನಗರ ಪಾಲಿಕೆಗಳಲ್ಲಿ ನಿಯಮ ಉಲ್ಲಂಘನೆಯ ವಿರುದ್ಧ ಕ್ರಮ ಕೈಗೊಳ್ಳಲು ಜಿಬಿಎ ಪ್ರತ್ಯೇಕ ತಂಡವನ್ನು ರಚಿಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.