ಶಿವಮೊಗ್ಗ: ಶಿವಮೊಗ್ಗದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಜಯಶ್ರೀ ಹೊಮ್ಮರಡಿ ಹಾಗೂ ಅವರ ಪುತ್ರ ಆಕಾಶ್ ಹೊಮ್ಮರಡಿ ಅವರು ಶುಕ್ರವಾರ ತಮ್ಮ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಡಾ. ಜಯಶ್ರೀ ಮತ್ತು ಅವರ ಮಗ ಇಬ್ಬರೂ ಪ್ರತ್ಯೇಕವಾಗಿ ತಮ್ಮ ತಮ್ಮ ಬೆಡ್ರೂಮ್ಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಅಶ್ವತ್ಥ್ ಬಡಾವಣೆಯಲ್ಲಿ ನಡೆದಿದೆ.
ಡಾ. ಜಯಶ್ರೀ(57) ಮತ್ತು ಮಗ ಆಕಾಶ್(32) ಇಬ್ಬರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ವಿನೋಬನಗರ ಠಾಣಾ ಪೊಲೀಸರು ಮನೆ ಪರಿಶೀಲನೆ ಮಾಡಿದ್ದು, ಈ ವೇಳೆ ಡೆತ್ ನೋಟ್ ಪತ್ತೆಯಾಗಿದೆ.
ಮೂಲತಃ ದಾವಣೆಗೆರೆ ಜಿಲ್ಲೆಯ ನ್ಯಾಮತಿಯ ಡಾ. ನಾಗರಾಜ ಹೊಮ್ಮರಡಿ ಕುಟುಂಬ ಶಿವಮೊಗ್ಗದ ಗಾಂಧಿನಗರದಲ್ಲಿ ಹೊಮ್ಮರಡಿ ಆಸ್ಪತ್ರೆಯ ಮೂಲಕ ಹಲವು ವರ್ಷಗಳಿಂದ ವೈದ್ಯಕೀಯ ಸೇವೆಯಲ್ಲಿ ತೊಡಗಿತ್ತು.
ಮಕ್ಕಳ ತಜ್ಞರಾಗಿದ್ದ ಡಾ.ನಾಗರಾಜ ಹೊಮ್ಮರಡಿ ಸಹ 10 ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಪುತ್ರ ಆಕಾಶ್ ಅವರ ಪತ್ನಿ ನವ್ಯಶ್ರೀ ಕೂಡ ಒಂದೂವರೆ ವರ್ಷದ ಹಿಂದೆ ಅದೇ ಮನೆಯಲ್ಲಿ ನೇಣಿಗೆ ಶರಣಾಗಿದ್ದರು.
ಇದರಿಂದ ಆಘಾತಕ್ಕೆ ಒಳಗಾಗಿದ್ದ ಡಾ. ನಾಗರಾಜ ಅವರ ಪತ್ನಿ ಜಯಶ್ರೀ ಅವರು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಮಗ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆಘಾತದಿಂದ ಹೊರಬರಲು ಕಳೆದ ಮೇ ತಿಂಗಳಲ್ಲಿ ಆಕಾಶ್ ಮತ್ತೊಂದು ಮದುವೆಯಾಗಿ ಆರು ತಿಂಗಳಾಗಿತ್ತು. ಹೀಗಿರುವಾಗ ತಾಯಿ ಮಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎರಡನೇ ಪತ್ನಿ ಮನೆಯಲ್ಲಿರುವಾಗಲೇ ಆಕಾಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.