ಬೆಂಗಳೂರು: ಮುದ್ದು ಮುದ್ದಾಗಿ ಸಾಕಿದ ಗಿಣಿಯನ್ನು ರಕ್ಷಿಸಲು ಹೋದ ವ್ಯಕ್ತಿಯೊಬ್ಬರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ.
ಸುಮಾರು 2.5 ಲಕ್ಷ ರೂಪಾಯಿ ಮೌಲ್ಯದ ತನ್ನ ಮುದ್ದಾದ ಗಿಣಿ ರಕ್ಷಿಸಲು ಯತ್ನಿಸಿದ 32 ವರ್ಷದ ವ್ಯಕ್ತಿಯೊಬ್ಬರಿಗೆ ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಮೃತರನ್ನು ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ. ಅವರು ವಾಹನದ ನಂಬರ್ ಪ್ಲೇಟ್ ತಯಾರಿಸುವ ವ್ಯವಹಾರ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಬೆಂಗಳೂರಿನ ಗಿರಿನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹೈ-ವೋಲ್ಟೇಜ್ ವಿದ್ಯುತ್ ಕಂಬದ ಮೇಲಿದ್ದ ತನ್ನ ದುಬಾರಿ ಮೊತ್ತದ ಗಿಣಿಯನ್ನು ರಕ್ಷಿಸಲು ಭರದಲ್ಲಿ ಕುಮಾರ್, ಕಾಂಪೌಂಡ್ ಗೋಡೆ ಮೇಲೆರಿದ್ದಾರೆ.
ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಗೋಡೆಯಿಂದ ಕೆಳಗಡೆ ಬಿದ್ದಿದ್ದಾರೆ. ತಕ್ಷಣ ಕುಮಾರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.