ಬೆಂಗಳೂರು: ದ್ವೇಷ ಭಾಷಣ ತಡೆಗೆ ಕರ್ನಾಟಕ ಸರ್ಕಾರ ಕಾನೂನು ತರಲು ಹೊರಟಿರುವುದು ಸಂವಿಧಾನಕ್ಕೆ ವಿರುದ್ಧವಾಗಿದ್ದು, ಅದರ ವಿರುದ್ಧ ಬಿಜೆಪಿ ಕಾನೂನಾತ್ಮಕ ಹೋರಾಟ ನಡೆಸಸಲಿದೆ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರವ ಅವರು, ಕರ್ನಾಟಕ ರಾಜ್ಯ ಸರ್ಕಾರ ಇವತ್ತು ದ್ವೇಷ ಭಾಷಣದ ವಿರುದ್ದ ಕಾನೂನು ತಂದಿರುವುದು ಸಂವಿಧಾನ ವಿರುದ್ದ ಇದೆ. ನಮ್ಮ ವಾಕ್ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಳಿಸುವ ಕಾನೂನು ಈಗಾಗಲೇ ದ್ವೇಷದ ಭಾಷಣ ತಡೆಯಲು ಸಾಕಷ್ಟು ಕಾನೂನುಗಳಿವೆ.
ಆ ಕಾನೂನು ಬಳಸಬಹುದು, ಆದರೆ, ಹತ್ತು ವರ್ಷದ ಶಿಕ್ಷೆ ಕಾನೂನು ತಂದು ಸರ್ಕಾರದ ವಿರುದ್ದ, ಅವರ ಪಕ್ಷದ ವಿರುದ್ದ ಮಾತನಾಡುವವರಿಗೆ ನಾನ್ ಬೆಲೆಬಲ್ ವಾರೆಂಟ್ ತಂದು ಜೈಲಿಗೆ ಕಳುಹಿಸುವ ಹುನ್ನಾರ ಇದರಲ್ಲಿ ಇದೆ. ಇದು ಪ್ರಜಾಪ್ರಭುತ್ವ ವಿರುದ್ದವಾಗಿದೆ ಎಂದು ಆರೋಪಿಸಿದ್ದಾರೆ.
ಒಂದು ರೀತಿಯಲ್ಲಿ ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ ಘೋಷಣೆ ಆಗಿದೆ ಅಂತ ಭಾವನೆ ಬರುತ್ತಿದೆ. ಸರ್ಕಾರ ಯಾವುದೇ ಅಭಿವೃದ್ದಿ ಕೆಲಸ ಮಾಡದೇ ಎಲ್ಲ ರಂಗದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರ ದೀನ ದಲಿತರ ಹಣವನ್ನು ಲಪಟಾಯಿಸಿರುವ ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಅದರ ವಿರುದ್ಧ ಯಾರಾದರೂ ಧ್ವನಿ ಎತ್ತಿದರೆ, ಅವರ ಧ್ವನಿಯನ್ನು ದಮನ ಮಾಡುವ ದಮನಕಾರಿ ಕಾನೂನು ತಂದಿದ್ದಾರೆ.
ಇದು ಒಂದು ರೀತಿಯಲ್ಲಿ ಸಿದ್ದರಾಮಯ್ಯ ಅವರ ರಾಜಕಾರಣಕ್ಕೆ ಇದು ಕಪ್ಪು ಚುಕ್ಕೆ. ವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಂವಿಧಾನದ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ಅವರು ಅದರ ತದ್ವಿರುದ್ದವಾಗಿ ನಡೆದುಕೊಂಡಿದ್ದಾರೆ. ನಾವು ಇದನ್ನು ಖಂಡಿಸುತ್ತೇವೆ ಅಲ್ಲದೇ ಇದರ ವಿರುದ್ದ ಬಿಜೆಪಿ ಕಾನೂನಾತ್ಮಕ ಹೋರಾಟ ಮಾಡುತ್ತದೆ ಎಂದು ಹೇಳಿದ್ದಾರೆ.