ಬೆಂಗಳೂರು: ರಾಜಧಾನಿಯ ಸಮೀಪ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಸಂಬಂಧ ಸ್ಥಳದ ಅನುಕೂಲ ಮತ್ತು ತಾಂತ್ರಿಕ ಹಾಗೂ ಆರ್ಥಿಕ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಪರಿಣತ ಸಲಹಾ ಸಂಸ್ಥೆಯ ಆಯ್ಕೆಗಾಗಿ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು (ಕೆಎಸ್ಐಐಡಿಸಿ) ಟೆಂಡರ್ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು 2026ರ ಜನವರಿ 12 ಕೊನೆಯ ದಿನವಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರು ಶನಿವಾರ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, 2ನೇ ವಿಮಾನ ನಿಲ್ದಾಣಕ್ಕಾಗಿ ರಾಜ್ಯ ಸರಕಾರವು ಕನಕಪುರ ರಸ್ತೆಯಲ್ಲಿರುವ ಚೂಡಹಳ್ಳಿ, ಸೋಮನಹಳ್ಳಿ ಮತ್ತು ನೆಲಮಂಗಲದ ಬಳಿ ಸ್ಥಳಗಳನ್ನು ಗುರುತಿಸಿದೆ. ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ ಉನ್ನತ ಮಟ್ಟದ ತಂಡವು ಇವುಗಳ ಪರಿಶೀಲನೆ ನಡೆಸಿ ಪ್ರಾಥಮಿಕ ವರದಿ ನೀಡಿದೆ. ಈಗ ಟೆಂಡರಿನಲ್ಲಿ ಆಯ್ಕೆಯಾಗುವ ಸಲಹಾ ಸಂಸ್ಥೆಯು 5 ತಿಂಗಳಲ್ಲಿ ಸರಕಾರಕ್ಕೆ ತನ್ನ ಸಮಗ್ರ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತಾ ವರದಿ ಕೊಡಬೇಕಾಗುತ್ತದೆ ಎಂದಿದ್ದಾರೆ.
ಕಳೆದ 5 ವರ್ಷಗಳಲ್ಲಿ ವಾರ್ಷಿಕವಾಗಿ 250 ಕೋಟಿ ರೂ. ಮೊತ್ತದ ಕೆಲಸಗಳನ್ನು ನಿರ್ವಹಿಸಿರುವಂಥ ಮತ್ತು ಸದರಿ ಕ್ಷೇತ್ರದಲ್ಲಿ ಕನಿಷ್ಠ ಪಕ್ಷ ಐದು ಯೋಜನೆಗಳನ್ನಾದರೂ ನಿರ್ವಹಿಸಿರುವ/ಸಲಹಾ ವರದಿ ನೀಡಿರುವಂತಹ ಸಂಸ್ಥೆಗಳು ಟೆಂಡರ್ ನಲ್ಲಿ ಭಾಗವಹಿಸಬಹುದು. ಟೆಂಡರ್ ನಲ್ಲಿ ಆಯ್ಕೆಯಾಗುವ ಸಂಸ್ಥೆಯು ನಾವು ಸೂಚಿಸುತ್ತಿರುವ ಮೂರೂ ಸ್ಥಳಗಳ ಮಳೆ ಪ್ರಮಾಣ, ಭೂಲಕ್ಷಣ, ವಿದ್ಯುತ್, ನೀರು, ಒಳಚರಂಡಿ, ತ್ಯಾಜ್ಯ ನಿರ್ವಹಣೆಯಂಥ ಮೂಲಸೌಕರ್ಯಗಳು, ಸುತ್ತಮುತ್ತಲಿನ ಜನಸಂಖ್ಯೆ, ಅಭಿವೃದ್ಧಿ, ಶಬ್ದ ಮತ್ತು ವಿಮಾನ ನಿಲ್ದಾಣದಿಂದ ಉಂಟಾಗುವ ಮಾಲಿನ್ಯ ಇತ್ಯಾದಿಗಳತ್ತ ಗಮನ ಹರಿಸಲಿದೆ ಎಂದು ಅವರು ಹೇಳಿದ್ದಾರೆ.
ಇದಲ್ಲದೆ ಉದ್ದೇಶಿತ 2ನೇ ವಿಮಾನ ನಿಲ್ದಾಣ ಅಭಿವೃದ್ಧಿಗೆ ತಗುಲುವ ವೆಚ್ಚ, ಅಗತ್ಯ ಇರುವ ಭೂಮಿ, ರಕ್ಷಣಾ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸೇರಿದಂತೆ ಹಲವು ಕಡೆಗಳಿಂದ ಪಡೆಯಬೇಕಾಗುವ ಅನುಮೋದನೆಗಳ ವಿವರಗಳು ಮುಂತಾದವನ್ನೂ ಈ ಕಾರ್ಯಸಾಧ್ಯತಾ ವರದಿಯಲ್ಲಿ ನೀಡಬೇಕಾಗುತ್ತದೆ. ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣದಿಂದ ಇಲ್ಲಿನ ಕೈಗಾರಿಕೆ, ಪ್ರವಾಸೋದ್ಯಮ, ಜನರ ಓಡಾಟ ಇತ್ಯಾದಿ ಅಂಶಗಳನ್ನೂ ಅದು ವಿವರಿಸಲಿದೆ ಎಂದು ಅವರು ನುಡಿದಿದ್ದಾರೆ.
ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಹಾಲಿ ಇರುವ ವಿವಿಧ ರೀತಿಯ ಸಂಪರ್ಕ, ವಿಮಾನ ನಿಲ್ದಾಣ ನಿರ್ಮಾಣ ನಂತರ ಏನೆಲ್ಲ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು ಎಂಬುದರ ಬಗ್ಗೆಯೂ ಸಲಹಾ ಸಂಸ್ಥೆ ಅಧ್ಯಯನ ನಡೆಸಲಿದೆ. ಇದಲ್ಲದೆ, ಸರಕು ಸಾಗಣೆ ಮತ್ತು ಪ್ರಯಾಣಿಕ ಸೇವೆಗಳು ಹಾಗೂ ಅದರಿಂದಾಗುವ ಆರ್ಥಿಕ ಕಾರ್ಯಸಾಧ್ಯತೆ ಬಗ್ಗೆಯೂ ಅಧ್ಯಯನ ನಡೆಸಬೇಕಾಗಿದೆ. ಒಟ್ಟಿನಲ್ಲಿ ಮೂರೂ ಸ್ಥಳಗಳ ಬಗ್ಗೆ ಅಧ್ಯಯನ ನಡೆಸಿ, ಯಾವುದು ಹೆಚ್ಚು ಸೂಕ್ತ ಎನ್ನುವ ಅಭಿಪ್ರಾಯ ಕೂಡ ಸಲಹಾ ಸಂಸ್ಥೆ ನೀಡಲಿದೆ ಎಂದು ಅವರು ಹೇಳಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈಗ ದಟ್ಟಣೆಯಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿದೆ. 2033ರ ಹೊತ್ತಿಗೆ ನಾವು ಮತ್ತೊಂದು ವಿಮಾನ ನಿಲ್ದಾಣ ಹೊಂದಬೇಕಾಗಿದೆ. ಮುಂದಾಲೋಚನೆಯನ್ನು ಇಟ್ಟುಕೊಂಡು ಈಗಿನಿಂದಲೇ ಪ್ರಯತ್ನಗಳನ್ನು ಆರಂಭಿಸಲಾಗಿದೆ. ಈಗಾಗಲೇ ಹೊಸದೆಹಲಿ ಮತ್ತು ಮುಂಬೈ ನಗರಗಳು ಎರಡೆರಡು ವಿಮಾನ ನಿಲ್ದಾಣ ಹೊಂದಿವೆ. ಕಾರ್ಯಸಾಧ್ಯತಾ ವರದಿ ಬಂದ ನಂತರ ಮುಂದಿನ ಹೆಜ್ಜೆ ಏನಿರಬೇಕೆಂದು ನಿರ್ಧರಿಸಲಾಗುವುದು ಎಂದು ಪಾಟೀಲ ವಿವರಿಸಿದ್ದಾರೆ.