ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೈ ಕೊರೆಯುವ ಚಳಿ ಮುಂದುವರಿದಿದ್ದು, ಜನ ಜೀವನದ ಮೇಲೆ ಪರಿಣಾಮ ಬೀರಿದೆ.
ಬೆಂಗಳೂರಿನಲ್ಲಿ ಡಿಸೆಂಬರ್ 13, 2025 ರಂದು 13.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಕಳೆದ ಎಂಟು ವರ್ಷಗಳಲ್ಲಿ ನಗರದಲ್ಲಿ ದಾಖಲಾದ ಅತ್ಯಂತ ಕನಿಷ್ಠ ತಾಪಮಾನ ಇದಾಗಿದೆ.
ಡಿಸೆಂಬರ್ 29, 1883 ರಂದು 8.9 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಡಿಸೆಂಬರ್ 11, 2016 ರಂದು ಕನಿಷ್ಠ 12 ಡಿಗ್ರಿ ಸೆಲ್ಸಿಯಸ್ ಮತ್ತು ಡಿಸೆಂಬರ್ 24, 2011 ರಂದು 12.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಡಿಸೆಂಬರ್ 16, 2013 ರಂದು ನಗರದಲ್ಲಿ ಕನಿಷ್ಠ ತಾಪಮಾನ 13.6 ಡಿಗ್ರಿ ಸೆಲ್ಸಿಯಸ್ ಮತ್ತು ಡಿಸೆಂಬರ್ 18, 2018 ರಂದು 13.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದೀಗ 8 ವರ್ಷಗಳ ಬಳಿಕ ನಗರದಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ.
ಬೆಂಗಳೂರು ಮತ್ತು ದಕ್ಷಿಣ ಕರ್ನಾಟಕದ ಇತರ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.
ಮುಂದಿನ ಕೆಲವು ದಿನಗಳಲ್ಲಿ ಈ ಪ್ರದೇಶದ ಕೆಲವು ಭಾಗಗಳಲ್ಲಿ ಹಗುರವಾದ ಮಳೆಯಾಗುವ ಮುನ್ಸೂಚನೆಯನ್ನೂ ಹವಾಮಾನ ಇಲಾಖೆ ನೀಡಿದೆ.
ಡಿಸೆಂಬರ್ 15, 2025 ರ ಸೋಮವಾರದಿಂದ ರಾತ್ರಿಯ ತಾಪಮಾನದಲ್ಲಿ ಸ್ವಲ್ಪ ಏರಿಕೆಯಾಗಲಿದೆ, ಇದಕ್ಕೆ ಕಾರಣ ಆಗ್ನೇಯ ದಿಕ್ಕಿನ ಗಾಳಿ. ಈ ಗಾಳಿಯು ವಾತಾವರಣದ ಮೇಲೆ ತೆಳುವಾದ ಮೋಡದ ಹೊದಿಕೆ ಮತ್ತು ನೀರಿನ ಆವಿಯ ಪದರವನ್ನು ರೂಪಿಸುತ್ತದೆ. ವಾತಾವರಣದಲ್ಲಿನ ತೇವಾಂಶದ ಮಟ್ಟವು ಹೆಚ್ಚಾಗುತ್ತದೆ, ಇದು ಹಗಲಿನ ತಾಪಮಾನದಲ್ಲಿ ಇಳಿಕೆಗೆ ಕಾರಣವಾಗುತ್ತದೆ ಮತ್ತು ರಾತ್ರಿಯ ತಾಪಮಾನದಲ್ಲಿ ಪ್ರಸ್ತುತ 14 ಡಿಗ್ರಿ ಸೆಲ್ಸಿಯಸ್‌ನಿಂದ ಸ್ವಲ್ಪ ಏರಿಕೆಯಾಗುತ್ತದೆ ಎಂದು ಐಎಂಡಿ ಹಿರಿಯ ವಿಜ್ಞಾನಿ ಸಿಎಸ್ ಪಾಟೀಲ್ ಅವರು ತಿಳಿಸಿದ್ದಾರೆ.