ಬೆಂಗಳೂರು: ಜೆಡಿಎಸ್ ನಾಯಕ ಮತ್ತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಮಂಗಳವಾರ 66ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಹೆಚ್‌ಡಿಕೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಜನ್ಮದಿನಕ್ಕೆ ಶುಭಾಶಯ ಕೋರಿದ ಪ್ರಧಾನಿ ಮೋದಿ ಅವರಿಗೆ ಹೆಚ್‌ಡಿ ಕುಮಾರಸ್ವಾಮಿ ಧನ್ಯವಾದ ಅರ್ಪಿಸಿದ್ದಾರೆ. ಪ್ರಧಾನಿ ಅವರ ಶುಭಾಶೀರ್ವಾದಿಂದ ಭಾವುಕರಾಗಿರುವುದಾಗಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನನ್ನ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಅವರ ಶುಭಾಶಯ ಹಾಗೂ ಶುಭಾಶೀರ್ವಾದದಿಂದ ನಾನು ಭಾವುಕನಾಗಿದ್ದೇನೆ ಮತ್ತು ವಿನೀತನಾಗಿದ್ದೇನೆ. ಅವರ ಪಿತೃವಾತ್ಸಲ್ಯಕ್ಕೆ ನಾನು ಧನ್ಯನಾಗಿದ್ದೇನೆ. ಮಾನ್ಯ ಪ್ರಧಾನಿಗಳ ಚಿಂತನಶೀಲ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ನನ್ನ ಮೇಲಿನ ನಂಬಿಕೆಗೆ ನಾನು ಚಿರಋಣಿ ಆಗಿದ್ದೇನೆಂದು ಹೇಳಿದ್ದಾರೆ.
ಪ್ರಧಾನಮಂತ್ರಿಗಳ ಶುಭಾಶೀರ್ವಾದ ಮತ್ತು ಸಂದೇಶವು ಸಾರ್ವಜನಿಕ ಸೇವೆಯು ಕೇವಲ ಒಂದು ಜವಾಬ್ದಾರಿಯಲ್ಲ; ಬದಲಿಗೆ ರಾಷ್ಟ್ರ, ಸಮಾಜ ಮತ್ತು ಸಾರ್ವಜನಿಕರ ಕಲ್ಯಾಣಕ್ಕಾಗಿ ಜೀವಮಾನದ ಅನನ್ಯ ಸಮರ್ಪಣೆಯಾಗಿದೆ ಎಂಬುದನ್ನು ನೆನಪಿಸುತ್ತದೆ ಎಂದು ತಿಳಿಸಿದ್ದಾರೆ.
ಸಮರ್ಪಣೆ, ಪರಿಶ್ರಮ ಮತ್ತು ನಿಸ್ವಾರ್ಥ ಸೇವೆಯ ಬಗ್ಗೆ ಅವರ ಮೆಚ್ಚುಗೆಯು ನನ್ನನ್ನು ಮತ್ತಷ್ಟು ಉತ್ತೇಜಿಸಿದೆ ಹಾಗೂ ರಾಷ್ಟ್ರಸೇವೆಗೆ ಸಮರ್ಪಿಸಿಕೊಳ್ಳಲು ಪ್ರೇರೇಪಣೆ ನೀಡಿದೆ. ನನ್ನನ್ನು ಹರಸಿ ಆಶೀರ್ವದಿಸಿದ ಮಾನ್ಯ ಪ್ರಧಾನಿಗಳಿಗೆ ಕೃತಜ್ಞನಾಗಿದ್ದೇನೆ. ನನ್ನ ಮೇಲೆ ಅವರು ಇರಿಸಿರುವ ನಂಬಿಕೆಗೆ ನಾನು ಋಣಿಯಾಗಿದ್ದೇನೆ. ಸರ್, ತಮಗೆ ನನ್ನ ಹೃದಯಪೂರ್ವಕ ವಿನಮ್ರ ಧನ್ಯವಾದಗಳು ಎಂದು ಹೇಳಿದ್ದಾರೆ.
ಈ ನಡುವೆ ಜೆಡಿಎಸ್ ಕೂಡ ತನ್ನ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದು, ಕುಮಾರಸ್ವಾಮಿಯವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದೆ.
ಕರ್ನಾಟಕದ ಜನಮೆಚ್ಚಿದ ಮಾಜಿ ಮುಖ್ಯಮಂತ್ರಿಗಳು, ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಜನ್ಮದಿನ ಹಾರ್ದಿಕ ಶುಭಾಶಯಗಳು ಎಂದು ಹೇಳಿದೆ.