ಕೋಲಾರ: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಯುವಕನೋರ್ವ ಎಡಗೈ ಕಳೆದುಕೊಂಡಿರುವ ದಾರುಣ ಘಟನೆ ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಇಂದು ನಡೆದಿದೆ.
ಚಿಕ್ಕ ಹೊಸಹಳ್ಳಿಯ ನಿವಾಸಿ ಸಂದೀಪ್ (26) ಎಂಬ ಯುವಕ ಬೆಳಗ್ಗೆ ಸುಮಾರು 7:30ರ ಸಮಯದಲ್ಲಿ ಕೆಜಿಎಫ್ ನಿಂದ ಬೆಂಗಳೂರಿಗೆ ತೆರಳುವ ಪ್ಯಾಸೆಂಜರ್ ರೈಲಿಗೆ ಹತ್ತಲು ಪ್ರಯತ್ನಿಸಿದ್ದಾನೆ. ರೈಲು ನಿಲ್ದಾಣದಲ್ಲಿ ನಿಲ್ಲದೇ ಚಲಿಸುತ್ತಿರುವಾಗಲೇ ಹತ್ತಲು ಹೋಗಿ ಕಾಲು ಜಾರಿ ಬಿದ್ದಿದ್ದಾನೆ.
ಈ ವೇಳೆ ರೈಲಿನ ಚಕ್ರಕ್ಕೆ ಸಿಲುಕಿ ಅವನ ಎಡಗೈ ತುಂಡಾಗಿ ರೈಲು ಹಳಿಯಲ್ಲೇ ಬಿದ್ದಿದೆ. ಯುವಕ ಒದ್ದಾಟದಿಂದ ಪ್ಲಾಟ್‌ಫಾರ್ಮ್‌ಗೆ ಬಿದ್ದು ಪ್ರಾಣ ಉಳಿಸಿಕೊಂಡಿದ್ದಾನೆ.
ಸ್ಥಳೀಯರು ಮತ್ತು ರೈಲು ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಸಂದೀಪ್ ಅವರನ್ನು ರಕ್ಷಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಕೈ ತುಂಡಾಗಿ ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮುಂದಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.
ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪಂಚೆನಾಮೆ ನಡೆಸಿದ್ದು, ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸಂದೀಪ್ ಅವರ ಕುಟುಂಬಸ್ಥರು ಆಸ್ಪತ್ರೆಯಲ್ಲಿ ಆತನ ಜೊತೆಗಿದ್ದಾರೆ. ಸ್ಥಳೀಯರು ಈ ಘಟನೆಯಿಂದ ಆಘಾತಗೊಂಡಿದ್ದು, ರೈಲು ನಿಲ್ದಾಣದಲ್ಲಿ ಹೆಚ್ಚಿನ ಸುರಕ್ಷಾ ಸಿಬ್ಬಂದಿ ನಿಯೋಜನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.