ಬೆಂಗಳೂರು: “ದೇಶದ ಐಕ್ಯತೆ ಹಾಗೂ ಸ್ವಾತಂತ್ರ್ಯಕ್ಕೆ ಪ್ರಾಣ ತ್ಯಾಗ ಮಾಡಿದ ಮಹಾತ್ಮ ಗಾಂಧಿಜಿ ಅವರ ಹೆಸರನ್ನು ನಾಥೂರಾಮ್ ಗೋಡ್ಸೆ ಪಕ್ಷದವರು ತೆಗೆಯಲು ಮುಂದಾಗಿದ್ದಾರೆ. ಗಾಂಧಿ ಭಾರತವನ್ನು ಗೋಡ್ಸೆ ಭಾರತವನ್ನಾಗಿ ಮಾಡಲು ಕಾಂಗ್ರೆಸಿಗರು ಬಿಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂದೇಶ ರವಾನಿಸಿದರು.
ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ನಡೆದ ಸತ್ಯಮೇವ ಜಯತೆ ಪ್ರತಿಭಟನಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
“ಈ ದೇಶದ ಸ್ವಾತಂತ್ರ್ಯದ ನಾಯಕತ್ವ ವಹಿಸಿದ ಮಹಾತ್ಮಾ ಗಾಂಧೀಜಿ ಅವರು ನೂರು ವರ್ಷಗಳ ಹಿಂದೆ ಕನ್ನಡ ನೆಲ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದರು. ಈ ದೇಶಕ್ಕೆ ಸ್ವಾತಂತ್ರ್ಯದ ಬುನಾದಿ ಹಾಕಿದರು. ಕಳೆದ ವರ್ಷ ನಾವು ಗಾಂಧಿ ಭಾರತ ಕಾರ್ಯಕ್ರಮ ಮಾಡಿದೆವು. ಮಹತ್ಮಾ ಗಾಂಧೀಜಿ ಅವರ ಹೆಸರಿನಲ್ಲಿ ನಮ್ಮ ಸರ್ಕಾರ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೆ ತಂದಿತು. ಈ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಭೂಮಿ ಮಟ್ಟ ಮಾಡಲು, ಕೊಟ್ಟಿಗೆ ನಿರ್ಮಾಣ, ಆಶ್ರಯಮನೆ ನಿರ್ಮಾಣ ಮಾಡಲು ಸರ್ಕಾರ ಕೂಲಿ ನೀಡುತ್ತದೆ. ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಮನಮೋಹನ್ ಸಿಂಗ್ ಅವರು ಈ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಮಹಾತ್ಮಾ ಗಾಂಧೀಜಿ ಅವರ ಹೆಸರಿನಲ್ಲಿ ತಂದ ಈ ಯೋಜನೆಯಲ್ಲಿ ಈ ಸರ್ಕಾರ ಗಾಂಧೀಜಿ ಅವರ ಹೆಸರು ತೆಗೆಯುತ್ತಿದೆ. ಬಿಜೆಪಿಗೆ ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧಿ ಚಿತ್ರವನ್ನು ತೆಗೆಯಿರಿ ಎಂದು ಹೇಳಿದೆ. ಮಹಾತ್ಮಾ ಗಾಂಧಿ ಅವರ ಹೆಸರು ಅಜರಾಮರ” ಎಂದು ತಿಳಿಸಿದರು.
“ಬಿಜೆಪಿಗರು ಗಾಂಧಿ ಪ್ರತಿಮೆ ಮುಂದೆ ನಿಂತು ಹೋರಾಟ ಮಾಡುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಹಾಗೂ ಶಾಸಕರು ಇನ್ನು ಮುಂದೆ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಬಾರದು ಎಂದು ಸವಾಲು ಹಾಕುತ್ತೇನೆ. ಬಡವರಿಗೆ ಉದ್ಯೋಗ ನೀಡುವ ಯೋಜನೆಯ ಹೆಸರಿನಿಂದ ನೀವು ಗಾಂಧೀಜಿ ಅವರ ಹೆಸರು ತೆಗೆಯುತ್ತಿದ್ದೀರಿ ಎಂದರೆ ನೀವು ದೇಶದ್ರೋಹಿಗಳು. ಬೇರೆ ದೇಶದ ನಾಯಕರು ನಮ್ಮ ದೇಶಕ್ಕೆ ಬಂದರೆ ಮೊದಲು ಅವರು ಗಾಂಧಿ ಸಮಾಧಿಗೆ ಹೋಗಿ ಪೂಜೆ ಮಾಡುತ್ತಾರೆ. ಗಾಂಧಿ ಭಾವಚಿತ್ರಕ್ಕೆ ನಮಿಸುತ್ತಾರೆ. ಆದರೆ ಗಾಂಧಿ ಅವರ ಹೆಸರು ತೆಗೆಯುವ ಮೂಲಕ ಮತ್ತೊಮ್ಮೆ ಗಾಂಧಿ ಅವರನ್ನು ಕೊಲ್ಲುತ್ತಿದ್ದೀರಿ ಎಂದು ಡಿಕೆ ಶಿವಕುಮಾರ್ ಟೀಕಾ ಪ್ರಹಾರ ನಡೆಸಿದ್ದಾರೆ.