ಬೆಂಗಳೂರು: ಅತೀವ್ರ ಚಳಿಗೆ ರಾಜ್ಯದ ಜನತೆ ತತ್ತರಿಸಿದ್ದು, ಈ ನಡುವೆ ಮುಂದಿನ ಎರಡು ದಿನಗಳ ಕಾಲ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ತೀವ್ರ ಚಳಿ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಆರೆಂಜ್ ಅಲರ್ಟ್ ಘೋಷಿಸಿದೆ.
ಬೀದರ್, ಕಲಬುರಗಿ, ವಿಜಯನಗರ, ಯಾದಗಿರಿ, ಬೆಳಗಾವಿ, ಬಾಗಲಕೋಟೆ ಹಾಗೂ ರಾಯಚೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಇದೇ ವೇಳೆ ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಿಗೂ ಶೀತ ಗಾಳಿ ಎಚ್ಚರಿಕೆ ನೀಡಲಾಗಿದೆ.
ಡಿಸೆಂಬರ್ 20ರಂದು ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ದಾಖಲಾಗಿದೆ.
ಐಎಂಡಿ ಅಂಕಿಅಂಶಗಳ ಪ್ರಕಾರ, ವಿಜಯಪುರದಲ್ಲಿ ಅತೀ ಕಡಿಮೆ 6.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, ಹಾಸನದಲ್ಲಿ 7 ಡಿಗ್ರಿ, ಬೀದರ್‌ನಲ್ಲಿ 7.4 ಡಿಗ್ರಿ ಹಾಗೂ ರಾಯಚೂರಿನಲ್ಲಿ 8.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಡಿಸೆಂಬರ್ 19ರಂದು ಐದು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿಗಿಂತ ಕಡಿಮೆ ದಾಖಲಾಗಿದ್ದು, ವಿಜಯಪುರದಲ್ಲಿ 7.4 ಡಿಗ್ರಿ ಹಾಗೂ ಬೀದರ್‌ನಲ್ಲಿ 7.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಡಿಸೆಂಬರ್ 18ರಂದು ರಾಯಚೂರಿನಲ್ಲಿ 9.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು.
ಐಎಂಡಿ–ಬೆಂಗಳೂರು ನಿರ್ದೇಶಕ (ಪ್ರಭಾರ) ಡಾ. ಎನ್. ಪುವಿಯರಸನ್ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಕನಿಷ್ಠ ತಾಪಮಾನ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಈಶಾನ್ಯ ದಿಕ್ಕಿನ ಹಾಗೂ ಕರಾವಳಿ ಕರ್ನಾಟಕದಲ್ಲಿ ಪೂರ್ವ ದಿಕ್ಕಿನ ಗಾಳಿ ಬೀಸುತ್ತಿದ್ದು, ಇದರಿಂದ ಚಳಿ ಹೆಚ್ಚಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಏತನ್ಮಧ್ಯೆ ಶೀತ ಗಾಳಿ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಋತುಸಹಜ ಜ್ವರ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹಾಗೂ ಎಲ್ಲಾ ಆರೋಗ್ಯ ಕೇಂದ್ರಗಳು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದೆ.
ಇನ್‌ಫ್ಲೂಯೆಂಜಾ ಕಾಯಿಲೆ ಹಾಗೂ ತೀವ್ರ ಉಸಿರಾಟ ಸೋಂಕುಗಳ ಮೇಲ್ವಿಚಾರಣೆಯನ್ನು ಹೆಚ್ಚಿಸುವಂತೆ ವೈದ್ಯಕೀಯ ಸಿಬ್ಬಂದಿಗೆ ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದೆ.