ಬೆಂಗಳೂರು: ಸಂಬಂಧಿಯಂತೆ ನಟಿಸಿ ಕಲ್ಯಾಣ ಮಂಟಪಗಳಲ್ಲಿ ಚಿನ್ನಾಭರಣ ಮತ್ತು ನಗದು ಕಳ್ಳತನದಲ್ಲಿ ತೊಡಗಿದ್ದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಬಂಧಿತ ಆರೋಪಿಯಿಂದ ₹ 32 ಲಕ್ಷ ಮೌಲ್ಯದ 262 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಮಂಜುನಾಥ ನಗರದ ನಿವಾಸಿಯೊಬ್ಬರು ತಮ್ಮ ದೂರಿನಲ್ಲಿ, ನವೆಂಬರ್ 23ರ ಬೆಳಿಗ್ಗೆ, ತಮ್ಮ ತಾಯಿಯೊಂದಿಗೆ ಸಂಬಂಧಿಕರ ಮದುವೆಯೊಂದರಲ್ಲಿ ಪಾಲ್ಗೊಳ್ಳಲು ಬಸವನಗುಡಿಯಲ್ಲಿರುವ ಕಲ್ಯಾಣ ಮಂಟಪಕ್ಕೆ ಹೋಗಿದ್ದರು. ಅವರು ಕಲ್ಯಾಣ ಮಂಟಪದ ಒಂದು ಕೋಣೆಯಲ್ಲಿ 32 ಗ್ರಾಂ ಚಿನ್ನದ ಸರ ಮತ್ತು ಕೃತಕ ಕಾಲರ್ ಚೈನ್ ಇದ್ದ ಬ್ಯಾಗನ್ನು ಇಟ್ಟಿದ್ದರು.
ಸಮಾರಂಭದ ನಂತರ, ಮನೆಗೆ ಹಿಂತಿರುಗಿ ಬ್ಯಾಗ್ ಪರಿಶೀಲಿಸಿದಾಗ, ಸುಮಾರು 3 ಲಕ್ಷ ರೂ. ಮೌಲ್ಯದ ಚಿನ್ನದ ಸರ ಮತ್ತು ಕೃತಕ ಕಾಲರ್ ಚೈನನ್ನು ಕದ್ದಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ, ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು.
'ತನಿಖೆಯ ಸಮಯದಲ್ಲಿ, ಪೊಲೀಸರು ವಿವಿಧ ಕೋನಗಳಿಂದ ವಿಚಾರಣೆ ನಡೆಸಿದರು ಮತ್ತು ಮಾಹಿತಿದಾರರಿಂದ ಪಡೆದ ವಿಶ್ವಾಸಾರ್ಹ ಮಾಹಿತಿ ಆಧಾರದ ಮೇಲೆ, ಡಿಸೆಂಬರ್ 1 ರಂದು ಕೆಆರ್ ಪುರಂನ ಉದಯನಗರದಲ್ಲಿರುವ ನಿವಾಸದಲ್ಲಿ ತಂಗಿದ್ದ ಮಹಿಳೆಯೊಬ್ಬರನ್ನು ಬಂಧಿಸಿದರು' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಆರೋಪಿಯು ಈ ಪ್ರಕರಣದ ಹೊರತಾಗಿ, ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಇತರ ಎರಡು ಪ್ರಕರಣಗಳಲ್ಲಿ ಕಳ್ಳತನ ಮಾಡಿರುವುದಾಗಿ ಮತ್ತು ಇತರ ಜಿಲ್ಲೆಗಳ ಕಲ್ಯಾಣ ಮಂಟಪಗಳಲ್ಲಿ ಚಿನ್ನಾಭರಣಗಳ ಕಳ್ಳತನವನ್ನು ಮಾಡಿರುವುದಾಗಿ ಬಹಿರಂಗಪಡಿಸಿದ್ದಾರೆ ಎಂದು ಅವರು ಹೇಳಿದರು.
ಕದ್ದ ಚಿನ್ನಾಭರಣಗಳ ಪೈಕಿ ಒಂದಷ್ಟನ್ನು ತನ್ನ ಮನೆಯಲ್ಲಿ ಇಟ್ಟಿರುವುದಾಗಿ ಮತ್ತು ಮಹಿಳೆ ಮತ್ತು ಆಕೆಯ ಪತಿ ಆ ಆಭರಣಗಳನ್ನು ಬ್ಯಾಂಕಿನಲ್ಲಿ ಅಡವಿಟ್ಟು ಚಿನ್ನದ ಸಾಲ ಪಡೆದಿರುವುದಾಗಿ ತಿಳಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.
ಡಿಸೆಂಬರ್ 2 ಮತ್ತು ಡಿಸೆಂಬರ್ 12ರ ನಡುವೆ, ಆಕೆಯ ನಿವಾಸ ಮತ್ತು ಬ್ಯಾಂಕಿನಿಂದ ಒಟ್ಟು 262 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಆಭರಣಗಳ ಒಟ್ಟು ಮೌಲ್ಯ 32 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ಬಂಧನದೊಂದಿಗೆ, ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೂರು ಕಳ್ಳತನ ಪ್ರಕರಣಗಳು ಬಗೆಹರಿದಿವೆ. ಇತರ ಜಿಲ್ಲೆಗಳಲ್ಲಿ ನಡೆದ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.