ಕನಕಪುರ: ಕನಕಪುರದಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು, ಒಂಟಿ ಸಲಗವೊಂದು ಮೊರಾರ್ಜಿ ಶಾಲೆಯ ಆವರಣಕ್ಕೇ ನುಗ್ಗಿದ್ದು ಇದು ಗ್ರಾಮಸ್ಥರ ಬೆಚ್ಚಿಬೀಳಿಸಿತ್ತು.
ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಊರಾದ ದೊಡ್ಡಆಲಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣಕ್ಕೆ ಒಂಟಿ ಸಲಗವೊಂದು ನುಗ್ಗಿ ಆತಂಕ ಸೃಷ್ಟಿಸಿತ್ತು. ಶಾಲೆಯ ಅವರಣದಲ್ಲಿ ಕಾಡಾನೆ ನುಗ್ಗಿ ಓಡಾಡಿ ಆತಂಕ ಸೃಷ್ಟಿಸಿತ್ತು.
ಮೂಲಗಳ ಪ್ರಕಾರ ಕಾವೇರಿ ವನ್ಯಜೀವಿಧಾಮದ ಕಡೆಯಿಂದ ಬಂದ ಒಂಟಿ ಸಲಗ, ಸಾತನೂರು ಮುಖ್ಯರಸ್ತೆಗೆ ಬಂದಿತ್ತು. ಈ ವೇಳೆ ಯಡಮಾರನಹಳ್ಳಿಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಅಚ್ಚಲು ಗ್ರಾಮ ಪಂಚಾಯಿತಿಯ ಕರ ವಸೂಲಿಗಾರ ರುದ್ರಸ್ವಾಮಿ ಮೇಲೆ ದಾಳಿ ನಡೆಸಿದೆ. ಬೈಕ್‌ನಿಂದ ಕೆಳಕ್ಕೆ ಬಿದ್ದ ಅವರು ಕೂಡಲೇ ಪಕ್ಕಕ್ಕೆ ಓಡಿ ಜೀವ ಉಳಿಸಿಕೊಂಡಿದ್ದಾರೆ.
ಬೆಚ್ಚಿ ಬಿದ್ದ ವಿದ್ಯಾರ್ಥಿಗಳು
ಬಳಿಕ ಆನೆ ದೊಡ್ಡಆಲಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣಕ್ಕೆ ನುಗ್ಗಿದೆ. ಆನೆಯನ್ನು ಕಂಡ ಶಾಲೆ ಸಿಬ್ಬಂದಿ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಬೋಧಕೇತರ ಸಿಬ್ಬಂದಿ ಕಟ್ಟಡದಿಂದ ಹೊರಕ್ಕೆ ಬಾರದಂತೆ ನೋಡಿಕೊಂಡಿದ್ದಾರೆ.
ಶಾಲೆಯಲ್ಲಿ ಸುಮಾರು 250 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ, ಶಾಲೆಗೆ ಸರಿಯಾದ ಕೌಂಪಾಂಡ್ ಇಲ್ಲದ ಕಾರಣ ಆನೆ ಶಾಲಾವರಣಕ್ಕೆ ಬಂದಿದೆ. ಇಲ್ಲದಿದ್ದರೆ, ಅದು ಬೇರೆ ಕಡೆಗೆ ಹೋಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಸಿಬ್ಬಂದಿ ದೌಡು
ಇನ್ನು ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಆನೆ ಕಾರ್ಯಪಡೆ ಸಿಬ್ಬಂದಿ, ಆನೆಯನ್ನು ಶಾಲಾವರಣದಿಂದ ಹೊರಕ್ಕೆ ಹೋಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ, ಕಾರ್ಯಾಚರಣೆ ಮೂಲಕ ಅರಣ್ಯಕ್ಕೆ ಓಡಿಸಿದ್ದಾರೆ.