ಬೆಂಗಳೂರು: ನೀವು ನಿಜವಾದ ಅಹಿಂದ ಲೀಡರ್ ಆಗಿದ್ದರೆ ಎಲ್ಲಿ ಬೇಕಾದರೂ ಗೆಲ್ಲಬಹುದಿತ್ತು. ನಿಮ್ಮ ಮಗ ಬಿಟ್ಟ ಕ್ಷೇತ್ರವನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ? ಇದು ಅಹಿಂದವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಜ.25ರಂದು ಮೈಸೂರಿನಲ್ಲಿ ಅಹಿಂದ ಸಮಾವೇಶ ಮಾಡುತ್ತಿದ್ದಾರೆ. ನಾವು ಜ.23ರಂದ ಹಾಸನದಲ್ಲಿ ಒಂದು ಸಮಾವೇಶ ಮಾಡುತ್ತೇವೆ. ಈ ಅಹಿಂದ ವ್ಯಾಖ್ಯಾನ ಮಾಡಲು ನಾನು ತಡವರಿಸುತ್ತೇನೆ. ಅದನ್ನು ವಿವರಿಸುವುದು ಕಷ್ಟ ಎಂದರು.
ಈ ದೇಶದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಹೆಣ್ಣು ಮಕ್ಕಳಿಗೆ ಮೀಸಲಾತಿ ಕೊಟ್ಟವರು ಯಾರು? ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಟ್ಟವರು ಯಾರು? ಆರು ರೆಸಿಡೆನ್ಶಿಯಲ್ ಸ್ಕೂಲ್ ಕೊಟ್ಟವರು ಯಾರು? ನಾಯಕ ಸಮುದಾಯಕ್ಕೆ ಮೀಸಲಾತಿ ತಂದವರು ಯಾರು ಎಂದು ಪ್ರಶ್ನಿಸಿದರು.
ಸಿದ್ಧರಾಮಯ್ಯ ಅವರನ್ನು ಗುರುತಿಸಿದ್ದು ನಾನು ಎಂದು ಹೇಳಲ್ಲ. ಅವರೇ ಹೇಳಿಕೊಳ್ಳಲಿ. ಅದನ್ನು ಅವರಿಗೆ ಬಿಡುತ್ತೇನೆ. ನಮ್ಮ ಬಗ್ಗೆ ಅವರು ಕಠಿಣವಾಗಿ ಮಾತನಾಡಲಿ. ಅವರ ಮೊದಲ ಮಗ ತೀರಿಕೊಂಡಾಗ ಅವರ ಮನೆಗೆ ಹೋಗಿದ್ದೆ.
ಡಾಕ್ಟರ್ ಆಗಿದ್ದ ಎರಡನೇ ಮಗನನ್ನು ರಾಜಕೀಯಕ್ಕೆ ತನ್ನಿ ಹೇಳಿದ್ದೆ. ಈ ಇಳಿವಯಸ್ಸಿನಲ್ಲೂ ಎಷ್ಟು ದುಡಿಯುತ್ತೀರಿ ಸಾರ್ ಎಂದು ಅವರು ಕೇಳಿದರು. ನಿಮ್ಮಂತವರು ಹೊರಗೆ ಹೋದ ಮೇಲೆ ಪಕ್ಷ ಉಳಿಸಲು ದುಡಿಯುತ್ತಿದ್ದೇನೆ ಎಂದಿದ್ದೆ ಎಂದು ದೇವೇಗೌಡರು ತಿಳಿಸಿದರು.
ಹಿಂದೆ ನೀವು ಬಾದಾಮಿ, ಕೋಲಾರ, ಮೈಸೂರು ಎಲ್ಲಿಂದ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಒಂದು ವರ್ಷ ಚರ್ಚೆಯಾಯಿತು. ಹುಬ್ಬಳ್ಳಿ ಅಹಿಂದ ಸಮಾವೇಶದಲ್ಲಿ ಆರ್.ಎಲ್.ಜಾಲಪ್ಪ ಮತ್ತು ತೇಜಸ್ವಿನಿ ನನ್ನನ್ನು ಹರಾಜು ಹಾಕಿದರು. ಅದೆಲ್ಲಾ ಆದ ಮೇಲೆ ನೀವು ಅಹಿಂದ ಲೀಡರ್ ತಾನೇ. ನನಗೆ ಶಕ್ತಿ ಇಲ್ಲ. ನಾನು ರಾಮನಗರಕ್ಕೆ ಬಂದೆ.
ನಾನು ಅಹಿಂದ ಲೀಡರ್ ಅಲ್ಲ. ರಾಮನಗರ ಒಕ್ಕಲಿಗರ ಕ್ಷೇತ್ರ. ಹೊಳೆನರಸೀಪುರದಲ್ಲಿ ಕುರುಬರನ್ನು ಎಂಎಲ್ಸಿ ಮಾಡಿದೆ. ಮೈಸೂರಿನಲ್ಲಿ ಚಿಕ್ಕಮಾದುನ ಎಂಎಲ್ಸಿ ಮಾಡಿದೆ. ಆದರೆ, ನೀವು ಒಂದು ಕ್ಷೇತ್ರ ಹುಡುಕಲು ಎಷ್ಟು ಚರ್ಚೆ ನಡೆಯಿತು. ನೀವು ಅಹಿಂದ ಲೀಡರ್ ಆಗಿದ್ದರೆ ಎಲ್ಲಿ ಬೇಕಾದರೂ ಗೆಲ್ಲಬಹುದಿತ್ತು ಎಂದು ಕಾಲೆಳೆದರು.