ಸಂಗ್ರಹ ಚಿತ್ರ 
ರಾಜ್ಯ

ರಾಯಚೂರಿನಲ್ಲಿ AIMS ಸ್ಥಾಪನೆ ಮನವಿ ತಿರಸ್ಕಾರ, ಕೇಂದ್ರದ ಈ ಬಜೆಟ್ ಕರ್ನಾಟಕದ ಪಾಲಿಗಂತೂ ಶೂನ್ಯ‌‌: ದಿನೇಶ್ ಗುಂಡೂರಾವ್

ಪ್ರತಿಬಾರಿಯಂತೆ ಈ ಬಾರಿಯೂ ಕರ್ನಾಟಕವನ್ನು ಬಜೆಟ್‌ನಲ್ಲಿ ಕಡೆಗಣಿಸುವ ಮೂಲಕ ಮೋದಿಯವರು ರಾಜ್ಯದ ಮೇಲಿನ ತಮ್ಮ ದ್ವೇಷವನ್ನು ಕಾರಿಕೊಂಡಿದ್ದಾರೆ.

ಬೆಂಗಳೂರು: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರಾಯಚೂರಿನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಸ್ಥಾಪನೆ ಕುರಿತ ರಾಜ್ಯ ಸರ್ಕಾರ ದೀರ್ಘಕಾಲದ ಬೇಡಿಕೆಯನ್ನು ನಿರ್ಲಕ್ಷಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಅವರು ಕಿಡಿಕಾರಿದ್ದಾರೆ.

ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರದ ಇಂದಿನ ಬಜೆಟ್ ಅತ್ಯಂತ ನಿರಾಶದಾಯಕ. ಕರ್ನಾಟಕದ ಪಾಲಿಗಂತೂ ಈ ಬಜೆಟ್‌ನ ಕೊಡುಗೆ ಶೂನ್ಯ‌‌. ಪ್ರತಿಬಾರಿಯಂತೆ ಈ ಬಾರಿಯೂ ಕರ್ನಾಟಕವನ್ನು ಬಜೆಟ್‌ನಲ್ಲಿ ಕಡೆಗಣಿಸುವ ಮೂಲಕ ಮೋದಿಯವರು ರಾಜ್ಯದ ಮೇಲಿನ ತಮ್ಮ ದ್ವೇಷವನ್ನು ಕಾರಿಕೊಂಡಿದ್ದಾರೆ. ದೇಶಕ್ಕೆ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯವಾದ ಕರ್ನಾಟಕ ಕೇಂದ್ರದ ಪಾಲಿಗೆ ಕಾಲಕಸದಂತಾಗಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಜೆಟ್ ಗಾತ್ರ ಕಳೆದ ವರ್ಷಕ್ಕಿಂತ 3,48,858 ಕೋಟಿ ಹೆಚ್ಚಳವಾಗಿದೆ. ಒಟ್ಟು 50,65,345 ಕೋಟಿಯ ಬಜೆಟ್ ಇದಾಗಿದ್ದರೂ ಯಾವುದರಲ್ಲೂ ಸ್ಪಷ್ಟತೆ ಇಲ್ಲ. ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರವನ್ನು ಆದ್ಯತಾ ವಲಯವಾಗಿ ಪರಿಗಣಿಸಿಯೇ ಇಲ್ಲ. ಹೆಚ್ಚು ಕಡಿಮೆ 51 ಲಕ್ಷ ಕೋಟಿ ಗಾತ್ರದ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಇಟ್ಟಿರುವ ಅನುದಾನ ಕೇವಲ‌ 98,311 ಕೋಟಿ ಮಾತ್ರ. ಮೋದಿ ಸರ್ಕಾರಕ್ಕೆ ಜನರ ಆರೋಗ್ಯದ ಬಗ್ಗೆ ಎಷ್ಟು ಅಸಡ್ಡೆಯಿದೆ ಎಂಬುದಕ್ಕೆ ಕೇಂದ್ರ ತೆಗೆದಿರಿಸಿರುವ ಅನುದಾನವೇ ಸಾಕ್ಷಿ.

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯಾಗಬೇಕು ಎಂಬ ರಾಜ್ಯದ ಜನರ ಅಭಿಲಾಷೆಯನ್ನು ಬಜೆಟ್‌ನಲ್ಲಿ ತಿರಸ್ಕರಿಸಲಾಗಿದೆ. ಅದೇ ರೀತಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಗೌರವಧನದಲ್ಲಿ ಕೇಂದ್ರ ಸರ್ಕಾರದ ಪಾಲನ್ನು 5000 ಹೆಚ್ಚಿಸಬೇಕು ಎಂಬ ಬೇಡಿಕೆ ಸಲ್ಲಿಸಿದ್ದೆವು. ಆ ಬೇಡಿಕೆಯನ್ನೂ ಬಜೆಟ್‌ನಲ್ಲಿ ತಿರಸ್ಕರಿಸುವ ಮೂಲಕ ಆಶಾ ಕಾರ್ಯಕರ್ತೆಯರ ನಿರೀಕ್ಷೆಗೆ ತಣ್ಣೀರು ಎರಚಲಾಗಿದೆ.

ರೈತ ಈ ದೇಶದ ಅನ್ನದಾತ. ಆದರೆ ಮೋದಿ ಸರ್ಕಾರ ರೈತರ ಮೇಲೆ ಪುರಾತನ ದ್ವೇಷವಿದ್ದಂತೆ ವರ್ತಿಸುತ್ತಿದೆ‌. MSPಗಾಗಿ ರೈತರು ಪ್ರತಿಭಟನೆ ನಡೆಸುತ್ತಿರುವುದು ಮೋದಿಯವರಿಗೆ ಗೊತ್ತಿದೆ. ಆದರೂ ಈ ಬಜೆಟ್‌ನಲ್ಲಿ MSPಯ ಪ್ರಸ್ತಾಪವೇ ಆಗಿಲ್ಲ. ಇನ್ನು ಕಳೆದ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ 1,31,196 ಕೋಟಿ ಅನುದಾನ ಕೊಟ್ಟಿದ್ದ ಕೇಂದ್ರ ಸರ್ಕಾರ ಈ ಬಾರಿ ಅನುದಾನದ ಮೊತ್ತವನ್ನು 1,27,290 ಕೋಟಿಗೆ ಇಳಿಸುವ ಮೂಲಕ ರೈತರ ಹೊಟ್ಟೆಗೆ ಒಡೆಯುವ ಕೆಲಸ ಮಾಡಿದೆ. ಬಿಜೆಪಿಯವರು ಈ ಬಜೆಟ್‌ನ್ನು ಯಾವ ಬಾಯಿಂದ ರೈತ ಪರ ಬಜೆಟ್ ಎಂದು ಹೇಳುತ್ತಾರೋ ದೇವರೇ ಬಲ್ಲ.

ಇನ್ನು ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಈ ಬಜೆಟ್‌ನಲ್ಲಿ ಒಂದೇ ಒಂದು ಅಂಶವೂ ಪ್ರಸ್ತಾಪವಾಗಿಲ್ಲ. ಮೇಕೆದಾಟು ಯೋಜನೆಯ ಅನುಷ್ಠಾನಕ್ಕಾಗಿ ನಮ್ಮ ಸರ್ಕಾರ ಕೇಂದ್ರದ ಬಳಿ ಬೇಡಿಕೆ ಇಡುತ್ತಲೆ ಇದ್ದೇವೆ. ಬಜೆಟ್‌ನಲ್ಲಿ ಆ ಬಗ್ಗೆ ಉಸಿರು ಬಿಟ್ಟಿಲ್ಲ. ಅದೇ ರೀತಿ ಮಹದಾಯಿ, ಭದ್ರಾ ಮೇಲ್ದಂಡೆ ಯೋಜನೆಗೆ ನಯಾಪೈಸೆ ಘೋಷಿಸಿಲ್ಲ. ಅತಿ ಹೆಚ್ಚು ತೆರಿಗೆ ಕೊಡುವ ಕರ್ನಾಟಕಕ್ಕೆ ಕೇಂದ್ರ ಮಾಡುತ್ತಿರುವ ಅತಿ ದೊಡ್ಡ ದ್ರೋಹವಿದು. ಆದರೂ ಬಿಜೆಪಿ ನಾಯಕರು ಈ ಬಜೆಟ್‌ನ್ನು ಹೊಗಳುತ್ತಿರುವುದನ್ನು ನೋಡಿದರೆ ಅವರನ್ನು ರಾಜ್ಯದ್ರೋಹಿಗಳೆನ್ನದೆ ಬೇರೆನೂ ಹೇಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ 200 ಡೇಕೇರ್ ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ಕುರಿತ ಕೇಂದ್ರದ ಘೋಷಣೆ ಕುರಿತು ಮಾತನಾಡಿ, ಕರ್ನಾಟಕವು ಈಗಾಗಲೇ ಮುಂದಿದೆ. ಮುಖ್ಯಮಂತ್ರಿಗಳು ಮುಂದಿನ ತಿಂಗಳು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇಂತಹ ಕೇಂದ್ರಗಳನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕದಲ್ಲಿ ಕಳೆದ ವರ್ಷವೇ ಈ ಯೋಜನೆಯನ್ನು ಘೋಷಿಸಲಾಗಿದೆ. ಯೋಜನೆ ಘೋಷಣೆಯಾದ ದಿನದಿಂದಲೂ ಸಕ್ರಿಯವಾಗಿ ಕಾರ್ಯನಿರ್ವಹಿಸಲಾಗಿದ್ದು, ಮುಂದಿನ ತಿಂಗಳು ಕ್ಯಾನ್ಸರ್ ಕೇಂದ್ರಗಳನ್ನು ಉದ್ಘಾಟಿಸಲಾಗುತ್ತಿದೆ ಎಂದರು.

ಕರ್ನಾಟಕವು ಈಗಾಗಲೇ ಜಿಲ್ಲಾ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಿದ್ದು, ಈ ಕೇಂದ್ರಗಳ ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ವಿವಿಧ ಸಂಸ್ಥೆಗಳೊಂದಿಗೆ ಸಹಕರಿಸಿದೆ ಎಂದು ತಿಳಿಸಿದರು.

ಕ್ಯಾನ್ಸರ್, ಅಪರೂಪದ ಕಾಯಿಲೆಗಳು ಮತ್ತು ತೀವ್ರ ದೀರ್ಘಕಾಲದ ಕಾಯಿಲೆಗಳಿಗೆ 36 ಜೀವರಕ್ಷಕ ಔಷಧಿಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡುವುದು ಸ್ವಾಗತಾರ್ಹ ಕ್ರಮವಾಗಿದ್ದರೂ, ಆಶಾ ಕಾರ್ಯಕರ್ತರಿಗೆ ಗೌರವಧನವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡಬೇಕಿತ್ತು ಎಂದು. ಈ ಕಾರ್ಯಕ್ರಮಗಳು ಕೇಂದ್ರೀಯವಾಗಿ ನಿರ್ವಹಿಸುತ್ತಿದ್ದರೂ, ಹೆಚ್ಚಿನ ಹಣವು ರಾಜ್ಯದಿಂದ ಬರುತ್ತದೆ, ಇದರಿಂದಾಗಿ ಕರ್ನಾಟಕವು ಆರ್ಥಿಕ ಹೊರೆಯನ್ನು ಹೊರಬೇಕಾಗುತ್ತದೆ ಮತ್ತು ಕೇಂದ್ರವು ಸಾಕಷ್ಟು ಬೆಂಬಲವನ್ನು ನೀಡಲು ವಿಫಲವಾಗಿದೆ ಎಂದು ಕಿಡಿಕಾರಿದರು.

ಗರ್ಭಕಂಠದ ಕ್ಯಾನ್ಸರ್‌ಗೆ HPV ಲಸಿಕೆ ಕಾರ್ಯಕ್ರಮ ಮತ್ತು ಹಣಕಾಸುಗಾಗಿ ಪದೇ ಪದೇ ವಿನಂತಿಗಳಿದ್ದರೂ, ಕೇಂದ್ರ ಸರ್ಕಾರವು ಅದನ್ನು ಪರಿಗಣಿಸಲು ವಿಫಲವಾಗಿದೆ, ಲೆಕ್ಕವಿಲ್ಲದಷ್ಟು ಜೀವಗಳನ್ನು ಉಳಿಸಬಹುದಾದ ನಿರ್ಣಾಯಕ ಉಪಕ್ರಮವನ್ನು ನಿರ್ಲಕ್ಷಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT