ಬೆಂಗಳೂರು: ಪೌರಕಾರ್ಮಿಕರು ವಿಶ್ರಾಂತಿ ಪಡೆಯಲು ನಗರದ 42 ಸ್ಥಳಗಳಲ್ಲಿ ಶಾಶ್ವತ ಕೊಠಡಿಗಳ ನಿರ್ಮಾಣ ಮಾಡಲಾಗುವುದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಂಗಳವಾರ ಹೇಳಿದರು.
ಪೂರ್ವ ವಲಯ ವ್ಯಾಪ್ತಿಯಲ್ಲಿ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ಸಂದರ್ಭದಲ್ಲಿ, ‘ಪೌರಕಾರ್ಮಿಕರ ವಿಶ್ರಾಂತಿಗಾಗಿ ವ್ಯವಸ್ಥೆ ಕಲ್ಪಿಸಬೇಕು’ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ನಗರದಲ್ಲಿ ಪೌರಕಾರ್ಮಿಕರು ವಿಶ್ರಾಂತಿ ಮಾಡುವ ಸಲುವಾಗಿ 42 ಕಡೆ ಶಾಶ್ವತ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಿ ಪೌರಕಾರ್ಮಿಕರು ವಿಶ್ರಾಂತಿ ಪಡೆಯಲು ಅನುವು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಕ್ರಮ ಪಾರ್ಕಿಂಗ್ ಶುಲ್ಕ ಸಂಗ್ರಹದ ಕುರಿತು ಮಾತನಾಡಿ, ಕಮರ್ಷಿಯಲ್ ಸ್ಟ್ರೀಟ್ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಪೇ ಆ್ಯಂಡ್ ಪಾರ್ಕ್ ಟೆಂಡರ್ ಪೂರ್ಣಗೊಂಡಿದೆ. ವಾಹನಗಳಿಂದ ಹಣ ವಸೂಲಿ ಮಾಡುವಂತಿಲ್ಲ. ಟೆಂಡರ್ ಕರೆದು ಅದು ಅಂತಿಮಗೊಳ್ಳುವವರೆಗೂ ಯಾರೂ ಶುಲ್ಕ ಪಡೆಯುವಂತಿಲ್ಲ. ಯಾರಾದರೂ ಶುಲ್ಕ ಪಡೆಯುತ್ತಿದ್ದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಬಿಬಿಎಂಪಿಯಲ್ಲಿ ವಾರ್ಡ್‌ಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಯಾವ ವಾರ್ಡ್‌ನಲ್ಲಿ ನಮ್ಮ ಸಮಸ್ಯೆ ಹೇಳಿಕೊಳ್ಳಬೇಕು ಎಂದು ತಿಳಿಯುತ್ತಿಲ್ಲ. ವಾರ್ಡ್ ಗಡಿ ನಿರ್ಮಾಣ ಮಾಡಿಕೊಡಬೇಕು’ ಎಂದು ನಾಗರಿಕರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಸಂಬಂಧಪಟ್ಟ ಅಧಿಕಾರಿಗಳು ಗಡಿ ನಿರ್ಮಾಣ ಮಾಡಬೇಕು ಎಂದು ಆದೇಶಿಸಿದರು.
ಪೂರ್ವ ವಲಯ ವ್ಯಾಪ್ತಿಯಲ್ಲಿ ಕಳೆದ ಬಾರಿ ನಡೆದ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಬಂದಂತಹ ಬಹುತೇಕ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಮಂಗಳವಾರ, 36 ದೂರುಗಳನ್ನು ಸ್ವೀಕರಿಸಲಾಗಿದ್ದು, ಕಾಲಮಿತಿಯೊಳಗೆ ಅವುಗಳೆಲ್ಲವನ್ನೂ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.