ರಾಯಚೂರು: ರಾಯಚೂರು ಮತ್ತು ಹಾಸನ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮಾನಸಿಕ ಅಸ್ವಸ್ಥ ಬಾಲಕಿ ಸೇರಿದಂತೆ ಇಬ್ಬರು ಅಪ್ರಾಪ್ತರ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮಾನ್ವಿ ತಾಲ್ಲೂಕಿನಲ್ಲಿ ಎರಡನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತೆ ಶಾಲಾ ಬಸ್‌ನಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಆರೋಪಿಗಳು ವ್ಯಾನ್‌ನಿಂದ ಬಾಲಕಿಯನ್ನು ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾರೆ.
ಸಂತ್ರಸ್ತೆಯನ್ನು ಆರಂಭದಲ್ಲಿ ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್) ಗೆ ಸ್ಥಳಾಂತರಿಸಲಾಗಿದೆ.
ತಮ್ಮ ಮಗುವನ್ನು ಅಪರಿಚಿತರೊಂದಿಗೆ ಹೊರಗೆ ಕಳುಹಿಸಿದ ಶಾಲೆಯ ಆಡಳಿತ ಮಂಡಳಿ ವಿರುದ್ಧ ಸಂತ್ರಸ್ತೆಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪರಾಧ ನಡೆದ ದಿನದಂದು ವಿದ್ಯಾರ್ಥಿಗಳ ಪ್ರವೇಶ ಮತ್ತು ನಿರ್ಗಮನವನ್ನು ನಿರ್ವಹಿಸುತ್ತಿದ್ದ ಶಾಲೆಯ ಸಿಬ್ಬಂದಿಯೊಬ್ಬರನ್ನೂ ಪೊಲೀಸರು ಪ್ರಶ್ನಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ರಾಯಚೂರು ಎಸ್‌ಪಿ ಎಂ ಪುಟ್ಟಮಾದಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಹಾಸನದಲ್ಲಿ ಬಾಲಕಿ ಮೇಲೆ ಅತ್ಯಾಚಾರ
ಹಾಸನ ಜಿಲ್ಲೆಯ ಹಳೇಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಮಾನಸಿಕ ಅಸ್ವಸ್ಥ ಬಾಲಕಿಯೊಬ್ಬಳ ಮೇಲೆ ಮತ್ತೊಂದು ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ವರದಿಯಾಗಿದೆ.
ಪೊಲೀಸರ ಪ್ರಕಾರ, ಸಂತ್ರಸ್ತೆಯ ಕುಟುಂಬವು ಸಂಬಂಧಿಕರ ಮನೆಯೊಂದರಲ್ಲಿನ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಮನೆಯಲ್ಲಿ ಬಾಲಕಿ ಒಬ್ಬಳೇ ಇರುವುದನ್ನು ಕಂಡು, ಆರೋಪಿ ಮನೆಯೊಳಗೆ ಪ್ರವೇಶಿಸಿದ್ದಾನೆ. ಚಾಕೊಲೇಟ್ ಕೊಡಿಸುವ ನೆಪದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಪೋಷಕರು ಮನೆಗೆ ಹಿಂತಿರುಗಿದಾಗ ಸಂತ್ರಸ್ತೆ ತೀವ್ರವಾಗಿ ಅಳುತ್ತಿರುವುದು ಕಂಡು ಬಂದಿದೆ. ಬಳಿಕ ವಿಚಾರಿಸಿದ ಪೋಷಕರು, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ.
ಈ ವಿಚಾರ ತಿಳಿದ ಆರೋಪಿ ತನ್ನ ನಿವಾಸದಿಂದ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.